State News 02-05-2013

Thursday, May 2nd, 2013

ಕರ್ನಾಟಕ ಸರ್ಕಾರ

ವಾರ್ತಾ ಇಲಾಖೆ

ನಂ.17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ ಬೆಂಗಳೂರು 560 001.

ದೂ. 080-22028032/34/ ಫ್ಯಾಕ್ಸ್ 22028041

ದಿನಾಂಕ: 02-05-2013

ಪತ್ರಿಕಾ ಆಮಂತ್ರಣ

ಕ್ರಮ ಸಂಖ್ಯೆ

ಕಾರ್ಯಕ್ರಮಗಳ ವಿವರ

ದಿನಾಂಕ, ವೇಳೆ

ಸ್ಥಳ

1 ಪತ್ರಿಕಾಗೋಷ್ಠಿ: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಶ್ರೀ ಅನಿಲ್ಕುಮಾರ್ ಝಾ ಅವರು ರಾಜ್ಯ ವಿಧಾನ ಸಭಾ ಚುನಾವಣೆ ಕುರಿತಂತೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 03-05-2013 ಗುರುವಾರ ಸಂಜೆ 5-30 ಗಂಟೆಗೆ ನಿರ್ವಾಚನ ನಿಲಯ, ಮುಖ್ಯ ಚುನಾವಣಾಧಿಕಾರಿ ಕಚೇರಿ, ಶೇಷಾದ್ರಿ ರಸ್ತೆ, ಬೆಂಗಳೂರು - 560 001.

ನಿರ್ದೇಶಕರ ಪರವಾಗಿ

ಮಾಧ್ಯಮದವರ ಗಮನಕ್ಕೆ

ರಾಜ್ಯದ 14ನೇ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಗಳಿಗೆ ಹಾಗೂ ಮತಎಣಿಕೆ ಕೇಂದ್ರಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಈಗಾಗಲೇ ವಾರ್ತಾ ಇಲಾಖೆಯಲ್ಲಿ ಹೆಸರುಗಳನ್ನು ನೋಂದಾಯಿಸಿಕೊಂಡಿರುವ ಪತ್ರಕರ್ತರಿಗೆ ರಹದಾರಿ ಪತ್ರಗಳನ್ನು ದಿನಾಂಕ 03-05-2013ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ವಾರ್ತಾ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳು ಕಚೇರಿ ಕೆಲಸದ ಸಮಯದಲ್ಲಿ ಬಂದು ತಮ್ಮ ರಹದಾರಿ ಪತ್ರಗಳನ್ನು ಪಡೆದುಕೊಳ್ಳುವಂತೆ ಕೋರಿದೆ.

ಪತ್ರಿಕಾ ಪ್ರಕಟಣೆ

ಮೇ 4 ಮತ್ತು 5 ರಂದು ಮಲೆಗಳಲ್ಲಿ ಮದುಮಗಳು ಪ್ರದರ್ಶನ ರದ್ದು

 

ಬೆಂಗಳೂರು, ಮೇ 2 (ಕರ್ನಾಟಕ ವಾರ್ತೆ): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮೇ 4  ಹಾಗೂ 5 ರಂದು, ಎರಡು ದಿನಗಳು ನಗರದ ಕಲಾಗ್ರಾಮದಲ್ಲಿ ನಡೆಯುತ್ತಿರುವ ಮಲೆಗಳಲ್ಲಿ ಮದುಮಗಳು ನಾಟಕ ಪ್ರದರ್ಶನವನ್ನು ರದ್ದು ಪಡಿಸಲಾಗಿದೆ.

ಜಿಲ್ಲಾ ಸುದ್ದಿಗಳು

ಬೆಂಗಳೂರು ಗ್ರಾಮಾಂತರ: ಮತದಾನ ಮಾಡಲು ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯ

ಬೆಂಗಳೂರು ಮೇ 02,(ಕರ್ನಾಟಕ ವಾರ್ತೆ): ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ  ಆಯೋಗ ಮತದಾನಕ್ಕೆ ಜನಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಿದೆ. ವಿಕಲ ಚೇತನರಿಗೆ ಹಾಗೂ ಅಂಧರಿಗೆ ಮತದಾನ ಮಾಡಲು ನೆರವಾಗಲು ಆಯೋಗವು  ರಾಜ್ಯದಲ್ಲಿ ಪ್ರಥಮ ಬಾರಿಗೆ ಅಂಧ ಮತದಾರರಿಗೆ ಬ್ರೈಲ್ ಲಿಪಿ ಇರುವ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಅಳವಡಿಸಿದೆ.  ಅಂಧರು ಯಾರ ಸಹಾಯವಿಲ್ಲದೆ ಮತದಾನ ಮಾಡಬಹುದಾಗಿದೆ.  ವಿಕಲಚೇತನರಿಗೆ ಮತದಾನ ಮಾಡಲು  ವಿಶೇಷ ಅನುಕೂಲಗಳನ್ನು  ಕಲ್ಪಿಸಿದ್ದು ಮತದಾನ ಕೇಂದ್ರಕ್ಕೆ ನೇರವಾಗಿ  ಪ್ರವೇಶಿಸಲು ಅನುಕೂಲವಾಗುವಂತೆ ಬಂದು ಮತದಾನ ಮಾಡಬಹುದು. 

ಮಹಿಳೆಯರು:  ಮಕ್ಕಳೊಂದಿಗೆ ಬರುವ ಮಹಿಳೆಯರಿಗೆ  ಸರತಿ ಸಾಲಿನಲ್ಲಿ ನಿಲ್ಲದಂತೆ ಮತದಾನ ಮಾಡಲು ಅವಕಾಶ ಕಲ್ಪಿಸಿದೆ.  ಹಾಗೂ ಮುಸ್ಲಿಂ ಮಹಿಳಾ ಮತದಾರರು ಹೆಚ್ಚಿಗೆಯಿರುವ ಮತ ಕೇಂದ್ರಗಳಲ್ಲಿ ಮಹಿಳಾ ಮತದಾರರನ್ನು ಗುರುತಿಸಲು ಮಹಿಳಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ.  ಹಿರಿಯ ನಾಗರೀಕರು ಸಹ ನೇರವಾಗಿ ಪ್ರವೇಶ ಪಡೆದು ಮತದಾನ ಮಾಡಬಹುದಾಗಿದೆ.

ಮತಗಟ್ಟೆಗೆ ಬರುವ ಮತದಾರರಿಗೆ ನೆರಳಿನ ಆಶ್ರಯ ಕಲ್ಪಿಸಲು   ಶಾಮಿಯಾನ, ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವಂತೆ ಆಯೋಗವು  ಜಿಲ್ಲಾ ಚುನಾವಣಾದಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರು ಗ್ರಾಮಾಂತರ ಮತದಾರರಿಗೆ ಸಹಾಯವಾಣಿ

ಬೆಂಗಳೂರು ಮೇ 2 (ಕರ್ನಾಟಕ ವಾರ್ತೆ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನೊಂದಣಿ ಭಾಗದ ಸಂಖ್ಯೆ ಮತಗಟ್ಟೆ ಕೇಂದ್ರ, ವಿಳಾಸ, ಗುರುತಿನ ಚೀಟಿಯ ಸಂಖ್ಯೆ ಇತರ ಮಾಹಿತಿಗಳನ್ನು ಪಡೆಯಲು ಮತದಾರರ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದೆ.  ಈ ಸಹಾಯ ಕೇಂದ್ರವು ಜಿಲ್ಲಾಧಿಕಾರಿಗಳ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಪೋಡಿಯಂ ಬ್ಲಾಕ್, ಬೆಂಗಳೂರು ದೂರವಾಣಿ ಸಂಖ್ಯೆ 080 22867844 ಅನ್ನು ಸಂಪರ್ಕಿಸಿ ಮತದಾರರು ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಶ್ರೀಮತಿ ಪಿ. ಹೇಮಲತಾ ಅವರು ತಿಳಿಸಿದ್ದಾರೆ.

ಕರ್ತವ್ಯಲೋಪ ಅಮಾನತ್ತು

ಬೆಂಗಳೂರು ಮೇ 2 (ಕರ್ನಾಟಕ ವಾರ್ತೆ): ವಿಧಾನ ಸಭಾ ಸಾರ್ವತ್ರಿಕ ಚುನಾವಣೆ 2013 ರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ವಿಚಕ್ಷಣ ದಳದ (ಈಟಥಿiಟಿg squಚಿಜ) ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಶ್ರೀ ನಾಗರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಇವರು ಚುನಾವಣಾ ಕೆಲಸದಲ್ಲಿ ಲೋಪವೆಸಗಿದ ಕಾರಣ ಈ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಶ್ರೀಮತಿ ಪಿ. ಹೇಮಲತಾ ಇವರು ಆದೇಶಿಸಿರುತ್ತಾರೆ.

ಮತದಾನ ಪವಿತ್ರ ಕರ್ತವ್ಯ

ಇದೇ ಮೇ-5 ರಂದು  ರಾಜ್ಯದ ವಿಧಾನ ಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ ಜರುಗಲಿದೆ. ಬೆಳಿಗ್ಗೆ  7 ರಿಂದ ಸಂಜೆ 5 ರವರೆಗೆ ಜರುಗುವ ಮತದಾನದ  ಪ್ರಕ್ರಿಯೆಯಲ್ಲಿ  ಪ್ರತಿಯೊಬ್ಬ ಅರ್ಹ ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕು  ಹಾಗೂ ಕರ್ತವ್ಯ ಪಾಲಿಸಲು  ಮರೆಯಕೂಡದು.               

ಪ್ರಜಾಭುತ್ವ ವ್ಯವಸ್ಥೆ ಹಾಗೂ ಕಾರ್ಯಾಚರಣೆಗೆ ಚುನಾವಣೆಗಳು ತಳಹದಿಯಾಗಿದೆ. ಯಶಸ್ವಿ ಪ್ರಜಾಪ್ರಭುತ್ವಕ್ಕೆ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಅಮೂಲ್ಯ ಮತ ಚಲಾಯಿಸಬೇಕು. ಮತದಾನ ಮತದಾರರ ಮೂಲಭೂತ ಹಕ್ಕು. ಅದು ಜನಸಾಮಾನ್ಯರ ಶಕ್ತಿ. ಈ ಪರಮಾಧಿಕಾರದ ಚಲಾವಣೆಯಲ್ಲಿ ಮತದಾರನ ಹೊಣೆ ಗುರುತರವಾಗಿದೆ.  ಈ ಹಕ್ಕು ನಿರ್ವಹಿಸುವಾಗ ಮತದಾರ ಹಲವು ಕರ್ತವ್ಯಗಳನ್ನು ಸಹ ಪಾಲಿಸಬೇಕಾಗುತ್ತದೆ.

ಪವಿತ್ರ ಕರ್ತವ್ಯ:   ಮತದಾನ  ಪವಿತ್ರ ಕರ್ತವ್ಯ. ಈ ಕರ್ತವ್ಯವನ್ನು  ಜವಾಬ್ದಾರಿಯಿಂದ ನಿರ್ವಹಿಸಿದಾಗ ಮಾತ್ರ ಪ್ರಜಾತಂತ್ರದ ಉದ್ದೇಶ ಸಫಲವಾಗುತ್ತದೆ.  ಈ ಉದ್ದೇಶಕ್ಕಾಗಿಯೇ  ಮತದಾನದ ಹಕ್ಕು ಪಡೆದಿರುವ ಎಲ್ಲ ನಾಗರಿಕರೂ ತಮ್ಮ ಹಕ್ಕ್ಕನ್ನು  ತಪ್ಪದೇ ಚಲಾಯಿಸಬೇಕು.  ಮತದಾನಕ್ಕಾಗಿ ಮತದಾರರು ಇರುವ ಸ್ಥಳದಲ್ಲೇ ಅಗತ್ಯ ಮತಗಟ್ಟೆಗಳನ್ನು ರಚಿಸಲಾಗಿದೆ.  ಯಾವೊಬ್ಬ ಅರ್ಹ ಮತದಾರನು ತನ್ನ ಹಕ್ಕು ಚಲಾಯಿಸುವುದರಿಂದ ವಂಚಿತವಾಗಬಾರದು ಎಂಬ ಸದುದ್ದೇಶದಿಂದ ವ್ಯಾಪಕ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕೈಕೊಳ್ಳಲಾಗುತ್ತಿದೆ. ರಾಜ್ಯಾಂಗದಿಂದ ಪ್ರಾಪ್ತವಾಗಿರುವ ಈ ಹಕ್ಕನ್ನು ವಿವೇಕಯುತವಾಗಿ ಪಾಲಿಸುವ ಮೂಲಕ ಜನಪ್ರತಿನಿಧಿಗಳ ಆಯ್ಕೆಯ ಈ ಪ್ರಕ್ರಿಯೆ ಯಶಸ್ವಿಯಾಗಲು ಪ್ರತಿಯೊಬ್ಬರು ಸಹಕರಿಸುವದು ಸಹ ಅಷ್ಟೇ ಮಹತ್ವದಾಗಿದೆ.

ಕರ್ತವ್ಯಗಳು: ಚುನಾವಣೆಗಳು ನಿಷ್ಪಕ್ಷಪಾತವಾಗಿ ಹಾಗೂ ಮುಕ್ತವಾಗಿ ಜರುಗಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಬಹು ದೊಡ್ಡ ಕಾರ್ಯ ನಿರ್ವಹಣೆಯಾಗಿದೆ.  ಅದಕ್ಕಾಗಿ ಬಹುದೊಡ್ಡ ಸಂಖ್ಯೆಯ  ಅಧಿಕಾರಿ - ಸಿಬ್ಬಂದಿಗಳು ಕಾರ್ಯಪ್ರವರ್ತರಾಗಿದ್ದಾರೆ.  ಓರ್ವ ಮತದಾರರಾಗಿ ನಮ್ಮ ಕರ್ತವ್ಯ ನಿರ್ವಹಣೆಯು ಅಷ್ಟೇ ಮಹತ್ವದ್ದಾಗಿದೆ. ದೇಶದ ಹಿತವೇ ನಮ್ಮ  ಮುಖ್ಯ ಗುರಿಯಾಗಿರುವದರಿಂದ  ಪ್ರತಿಯೊಬ್ಬ ಮತದಾರರು ನಿರ್ಭಿತಿಯಿಂದ ಯಾವುದೇ ಧರ್ಮ , ಜನಾಂಗ , ಜಾತಿ , ಮತ, ಭಾಷೆ ಅಥವಾ ಪ್ರೇರಣೆಗಳ ದಾಕ್ಷಿಣಕ್ಕೆ ಪ್ರಭಾವಿತರಾಗದೇ ಪ್ರಾಮಾಣಿಕವಾಗಿ ಮತ ಚಲಾಯಿಸಬೇಕು. ನೀವು ನೀಡುವ ಮತ ಗೌಪ್ಯವಾಗಿರುತ್ತದೆ ಹಾಗೂ ನಿರ್ಣಾಯಕವಾಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಸುಗಮ ಹಾಗೂ ನ್ಯಾಯಯುತ ಚುನಾವಣೆಗಾಗಿ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಸದಾಚಾರ ಸಂಹಿತೆಯನ್ನು ಪಾಲಿಸುವರು ಅಗತ್ಯವಾಗಿದೆ.  ಮತದಾರರಿಗೆ ಅಮಿಷವೊಡ್ಡುವದು, ಅವರಿಗೆ ಬೆದರಿಕೆ ಹಾಕುವದು ಮತ್ತು  ಮತದಾನದ ದಿನ  ಮತಗಟ್ಟೆಯ 200 ಮೀಟರ ವ್ಯಾಪ್ತಿ ಪ್ರದೇಶದಲ್ಲಿ    ಪ್ರಚಾರವನ್ನು  ನಿಷೇದಿಸಲಾಗಿದೆ. ಮತದಾನ ಕೊನೆಗೊಳ್ಳುವ 48 ತಾಸು ಮೊದಲು  (ಅಂದರೆ ಮೇ 3 ರಂದು ಸಂಜೆ 5 ಗಂಟೆಯ ನಂತರ) ಬಹಿರಂಗ ಸಾರ್ವಜನಿಕ ಸಭೆ ನಡೆಸುವದು . ಮತಗಟ್ಟೆಗೆ ಮತದಾರರನ್ನು ವಾಹನಗಳಲ್ಲಿ ಕರೆತರುವದೂ ಕೂಡಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.   

ಗಮನದಲ್ಲಿರಲಿ: ಮತದಾನದ ದಿನದಂದು ಸಂಬಂಧಿಸಿದ ಮತಗಟ್ಟೆಗೆ ಹೋಗುವ  ಪೂರ್ವದಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವದನ್ನು ಖಾತ್ರಿಪಡಿಸಿಕೊಳ್ಳುವದು ಅತೀ ಮುಖ್ಯವಾದದ್ದಾಗಿದೆ.  ಈ ಬಾರಿ ಪ್ರತಿ ಮತದಾರರಿಗೂ ಚುನಾವಣಾ ಆಯೋಗದಿಂದ ಮತದಾರರ ಫೋಟೋ ಹಾಗೂ ಮತಗಟ್ಟೆ ವಿವರ ಇರುವ ಚೀಟಿ (ಸ್ಲಿಪ್ ) ನೀಡುವ ವ್ಯವಸ್ಥೆ ಮಾಡಲಾಗಿದೆ.  ಈ ಚೀಟಿಯನ್ನೇ ಮತದಾರರ ಗುರುತಿನ ಚೀಟಿಯನ್ನಾಗಿ ಪರಿಗಣಿಸಲಾಗುತ್ತದೆ.  ಅಕಸ್ಮಾತ್ ಇಂತಹ   ಸ್ಲಿಪ್ ಇಲ್ಲದಿದ್ದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ತಮ್ಮ ಗುರುತಿಗಾಗಿ ಚುನಾವಣಾ ಆಯೋಗ ಈಗಾಗಲೇ ವಿತರಿಸಿದ ಭಾವಚಿತ್ರವಿರುವ (ಎಪಿಕ್ ) ಕಾರ್ಡನ್ನಾಗಲಿ ಅಥವಾ ಚುನಾವಣಾ ಆಯೋಗ ನಿಗದಿಪಡಿಸಿದ ದಾಖಲೆಗಳಲ್ಲಿಯ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೋರಿಸಿ ಮತ ಚಲಾಯಿಸಬೇಕಾಗುತ್ತದೆ. .

ಮತದಾನ ದೇಶಾಭಿಮಾನದ ಸಂಕೇತ,   ಪ್ರತಿಯೊಬ್ಬರು ತಪ್ಪದೇ ಬಿಡುವು ಮಾಡಿಕೊಂಡು   ಮತದಾನ ಮಾಡುವದನ್ನು ಮರೆಯದಿರಿ. ಸಂವಿಧಾನ್ಮಾತಕವಾಗಿ  ದೊರೆತ ಮತ ಚಲಾವಣೆ ಹಕ್ಕನ್ನು ತಪ್ಪೆದೇ ಚಲಾಯಿಸುವ ಮೂಲಕ ದೇಶದ ಭದ್ರ ಭವಿಷ್ಯ  ರೂಪಿಸುವದಕ್ಕೆ  ಸಹಕರಿಸಲು ಮನವಿ ಮಾಡಲಾಗಿದೆ. 

ಪಿ. ಎಸ್. ಪರ್ವತಿ

ಹಿರಿಯ ಸಹಾಯಕ ನಿರ್ದೇಶಕರು

ರಾಜ್ಯ ಸಮಾಚಾರ ಕೇಂದ್ರ,ಹುಬ್ಬಳ್ಳಿ

ಗದಗ: ಚುನಾವಣೆಗೆ ನಿಯೋಜಿತ ಅಧಿಕಾರಿಗಳಿಗೆ ವಾಹನ ಸೌಲಭ್ಯ

ಗದಗ : ಮೇ 02 ( ಕರ್ನಾಟಕ  ವಾರ್ತೆ) : ಮೇ 05ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಗದಗ ಜಿಲ್ಲೆಯ ಶಿರಹಟ್ಟಿ, ರೋಣ ಮತ್ತು ನರಗುಂದ ಮತಕ್ಷೇತ್ರಗಳಿಗೆ ಗದಗದಿಂದ ಚುನಾವಣಾ ಕಾರ್ಯಕ್ಕೆ ವಾಹನಗಳು ತೆರಳಲಿವೆ. ಸದರಿ ವಿಧಾನಸಭಾ ಮತಕ್ಷೇತ್ರಗಳಿಗೆ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಅಥವಾ ಸಿಬ್ಬಂಧಿಗಳು  ಈ ವಾಹನಗಳಲ್ಲಿ ತಮ್ಮ ಕಾರ್ಯಕ್ಷೇತ್ರಕ್ಕೆ ತೆರಳಬಹುದಾಗಿದೆ. ಈ ವಾಹನಗಳು ಮೇ 04ರಂದು ಬೆಳಿಗ್ಗೆ 6ಗಂಟೆಗೆ ಗದಗದ ಮುನ್ಸಿಪಲ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಮೈದಾನದಿಂದ ಹೊರಡಲಿವೆ. ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಈ ಸೌಲಭ್ಯದ ಲಾಭ ಪಡೆದುಕೊಳ್ಳುವಂತೆ ಗದಗದ ಉಪವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ: ಮತದಾರರ ಗುರುತಿಗೆ ಪರ್ಯಾಯ 23 ದಾಖಲೆಗಳು

ಕೊಪ್ಪಳ ಮೇ. 02 (ಕ.ವಾ): ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಇಲ್ಲದೇ ಇರುವವರು, ತಮ್ಮ ಗುರುತು ಸಾಬೀತಿಗೆ ಚುನಾವಣಾ ಆಯೋಗ ಪರ್ಯಾಯವಾಗಿ 23 ದಾಖಲೆಗಳನ್ನು ಸೂಚಿಸಿದ್ದು, ಈ 23 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು, ಮತದಾರರು ತಮ್ಮ ಮತ ಚಲಾಯಿಸಬಹುದಾಗಿದೆ.

ವಿಧಾನಸಭೆ ಚುನಾವಣೆಗೆ ಮೇ. 05 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡಲು ಅವಧಿ ನಿಗದಿಪಡಿಸಲಾಗಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಡ್ಡಾಯವಾಗಿ ಇರಬೇಕು. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಹೊಂದಿರಬೇಕು, ಅಥವಾ ಈ ಬಾರಿ ಬೂತ್ ಮಟ್ಟದ ಅಧಿಕಾರಿಗಳು ನೀಡುವ ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಸಾಕು, ಇತರೆ ಯಾವುದೇ ದಾಖಲೆಗಳಿಲ್ಲದೇ ಇದ್ದರೂ ತಮ್ಮ ಮತವನ್ನು ಚಲಾಯಿಸಬಹುದು.  ಮೇಲಿನ ಎರಡೂ ದಾಖಲೆಗಳು ಇಲ್ಲದೇ ಇರುವವರಿಗೂ ಮತ ಚಲಾಯಿಸಲು ಚುನಾವಣಾ ಆಯೋಗ ಪರ್ಯಾಯವಾಗಿ 23 ಬಗೆಯ ದಾಖಲೆಗಳನ್ನು ನಿಗದಿಪಡಿಸಿದ್ದು, ಈ 23 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಗಳಿದ್ದಲ್ಲಿ, ಮತ ಚಲಾಯಿಸಬಹುದಾಗಿದೆ. 

ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ವಾಹನ ಚಾಲನ ಪರವಾನಿಗೆ ಪತ್ರ, ಪಾನ್ ಕಾರ್ಡ್, ನೌಕರರ ಗುರುತಿನ ಚೀಟಿ, ಬ್ಯಾಂಕ್ ಖಾತೆ ಪುಸ್ತಕ, ಕಿಸಾನ್ ಕಾರ್ಡ್, ವಿದ್ಯಾರ್ಥಿಗಳಿಗೆ ಕಾಲೇಜುಗಳು ನೀಡುವ ಗುರುತಿನ ಚೀಟಿ, ಭಾವಚಿತ್ರವಿರುವ ಜಮೀನಿನ ಪಟ್ಟಾ, ನೋಂದಣಿಯಾದ ಡೀಡ್, ಭಾವಚಿತ್ರವಿರುವ ಪಡಿತರ ಚೀಟಿ, ಭಾವಚಿತ್ರವಿರುವ ಜಾತಿ ಪ್ರಮಾಣಪತ್ರ, ಮಾಜಿ ಸೈನಿಕರ, ವಯೋವೃದ್ಧ, ವಿಧವಾ ಪಿಂಚಣಿ ಪುಸ್ತಕ, ಸ್ವತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಶಸ್ತ್ರ ಪರವಾನಿಗೆ ಪತ್ರ, ಮಾಜಿ ಸೈನಿಕರ ಸಿಎಸ್‌ಡಿ ಕ್ಯಾಂಟೀನ್ ಕಾರ್ಡ್, ಅಂಗವಿಕಲರ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ ಮಂಜೂರಾತಿ ಪತ್ರ, ಉದ್ಯೋಗಖಾತ್ರಿ ಗುರುತಿನ ಚೀಟಿ, ಯಶಸ್ವಿನಿ ಕಾರ್ಡ್, ನಗರ/ಸ್ಥಳೀಯ ಸಂಸ್ಥೆಗಳ ನೌಕರರಿಗೆ ನೀಡಿರುವ ಗುರುತಿನ ಚೀಟಿ, ಕಾರ್ಮಿ ಇಲಾಖೆ ನೀಡಿರುವ ಆರೋಗ್ಯ ವಿಮಾ ಪ್ರಮಾಣ ಪತ್ರ, ಆರ್‌ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್, ಆಧಾರ ಕಾರ್ಡ್ ಸೇರಿದಂತೆ 23 ದಾಖಲಾತಿಗಳಲ್ಲಿ ಯಾವುದಾದರೂ ಒಂದು ದಾಖಲೆ ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಸ್ವೀಪ್ ಪರಿಣಾಮ : ಮತದಾನ ಪ್ರಮಾಣದಲ್ಲಿ ಹೆಚ್ಚಳದ ನಿರೀಕ್ಷೆ- ಡಿ.ಕೆ. ರವಿ

ಕೊಪ್ಪಳ ಮೇ. 02 (ಕ.ವಾ): ಮತದಾನದ ಮಹತ್ವ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಜಾರಿಗೆ ತಂದ ಸ್ವೀಪ್ ಕಾರ್ಯಕ್ರಮದ ಪರಿಣಾಮವಾಗಿ ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಪ್ರಮಾಣವನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾರರ ಜಾಗೃತಿಗಾಗಿ ಸ್ವೀಪ್ ಕಾರ್ಯಕ್ರಮದಡಿ ಕೈಗೊಂಡ ಹಲವು ಕ್ರಮಗಳ ಪ್ರಗತಿ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮತದಾರರು ತಮ್ಮ ಪವಿತ್ರ ಕರ್ತವ್ಯದಿಂದ ವಿಮುಖರಾಗುತ್ತಿರುವ ಪರಿಣಾಮವಾಗಿ ದೇಶದ ಅನೇಕ ಕಡೆಗಳಲ್ಲಿ ಕನಿಷ್ಟ ಪ್ರಮಾಣದ ಮತದಾನ ದಾಖಲಾಗಿರುವುದು ಆತಂಕಕಾರಿ ಸಂಗತಿಯಾಗಿದೆ.  ಜನಹಿತ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸುವಂತಹ ಜವಾಬ್ದಾರಿಯನ್ನು ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ವಹಿಸಿಕೊಡಲಾಗಿದ್ದು, ಇಂತಹ ಜನಪ್ರತಿನಿಧಿಗಳು ಈ ನಾಡಿನ ಎಲ್ಲ ಮತದಾರರ ಪ್ರತಿನಿಧಿಯಾಗಿರುತ್ತಾರೆ.  ಇಂತಹ ಜನಪ್ರತಿನಿಧಿಯನ್ನು ಶೇ. 100 ರಷ್ಟು ಮತದಾರರೇ ಆಯ್ಕೆ ಮಾಡಿದಲ್ಲಿ, ಅದು ಸೂಕ್ತ.  ಆದರೆ ಕೇವಲ ಶೇ. 60 ರಿಂದ 65 ರಷ್ಟು ಮತದಾರರು ಮಾತ್ರ ಮತ ಚಲಾಯಿಸಿದಲ್ಲಿ, ಅದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿದಂತಾಗುತ್ತದೆ.  ಎಲ್ಲ ಮತದಾರರು ಅಂದರೆ ಶೇ.  100 ರಷ್ಟು ಮತದಾನವಾಗಬೇಕೆಂಬುದೇ ನಮ್ಮ ಜನತಂತ್ರದ ಸಿದ್ದಾಂತವಾಗಿದ್ದು, ಹೀಗಾದಾಗ ಮಾತ್ರ ಜನಪ್ರತಿನಿಧಿಯ ಆಯ್ಕೆ ಸಮಂಜಸ ಎನಿಸಿಕೊಳ್ಳುತ್ತದೆ.  ಜಿಲ್ಲೆಯಲ್ಲಿ ಈಗ ಸುಮಾರು 9. 33 ಲಕ್ಷ ಮತದಾರರಿದ್ದಾರೆ.  ಇವರಲ್ಲಿ ಎಲ್ಲ ಮತದಾರರಾದರೂ ತಮ್ಮ ಹಕ್ಕನ್ನು ಚಲಾಯಿಸಿದಾಗ ಮಾತ್ರ ಚುನಾವಣೆ ವ್ಯವಸ್ಥೆಗೆ ಒಂದು ಅರ್ಥ ಬಂದಂತಾಗುತ್ತದೆ ಎಂದರು.

ಕಳಪೆ ಸಾಧನೆ : ಕಳೆದ 2008 ರಲ್ಲಿ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಲ್ಲಿ ಶೇ. 60. 73, ಕನಕಗಿರಿ- ಶೇ. 56. 30, ಗಂಗಾವತಿ- ಶೇ. 63. 34, ಯಲಬುರ್ಗಾ- ಶೇ. 66. 54 ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಶೇ. 65. 22 ರಷ್ಟು ಅಂದರೆ ಒಟ್ಟಾರೆ ಜಿಲ್ಲೆಯಲ್ಲಿ ಶೇ. 62. 39 ರಷ್ಟು ಮತದಾನವಾಗಿದೆ.  ಅದರಲ್ಲೂ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಶೇ. 56. 30 ರಷ್ಟು ಮತದಾನವಾಗಿರುವುದು ವಿಷಾದಕರ ಸಂಗತಿಯಾಗಿದೆ.   ಈ ರೀತಿಯ ಕಡಿಮೆ ಮತದಾನ ಪ್ರಮಾಣದ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು.  ಎಲ್ಲ ಮತದಾರರೂ ಕಡ್ಡಾಯವಾಗಿ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ಯಾವುದೇ ವಯಕ್ತಿಕ ಲಾಭದ ನಿರೀಕ್ಷೆ ಇಟ್ಟುಕೊಳ್ಳದೆ ಮತಗಟ್ಟೆಗೆ ಬಂದು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು.  ಮತದಾನದ ಪಾವಿತ್ರ್ಯತೆಗೆ ಗೌರವ ಸಲ್ಲಿಸಬೇಕು ಎಂದರು.

ಮತದಾರರ ಜಾಗೃತಿಗೆ ವ್ಯಾಪಕ ಕ್ರಮ : ಮೊದಲ ಹಂತದಲ್ಲಿ ಮತದಾರರ ನೊಂದಣಿಗೆ ಹೆಚ್ಚಿನ ಒತ್ತು ನೀಡಿ, ಜಿಲ್ಲೆಯಾದ್ಯಂತ ಮ್ಯಾರಥಾನ್ ಓಟ, ಕಾಲೇಜು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಉತ್ತೇಜನ, ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.  ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ 32259 ರಷ್ಟು ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.  ಎರಡನೆ ಹಂತವಾಗಿ ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಕೇಂದ್ರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮ್ಯಾರಥಾನ್ ಓಟ ಸ್ಪರ್ಧೆ ಏರ್ಪಡಿಸಲಾಯಿತು, ಆಕಾಶವಾಣಿ ಕೇಂದ್ರದ ಸಹಕಾರದೊಂದಿಗೆ ನೇರ-ಫೋನ್-ಇನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.  ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಶಾಲಾ ಮಕ್ಕಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ಆಯಾ ಪ್ರದೇಶಗಳಲ್ಲಿ ಪ್ರಭಾತಫೇರಿ ನಡೆಸಿ ಜಾಗೃತಿ ಮೂಡಿಸಲಾಯಿತು.  ಎಲ್ಲ ವಿದ್ಯಾರ್ಥಿಗಳ ಪೋಷಕರು, ಪಾಲಕರಿಗೆ ಕಡ್ಡಾಯವಾಗಿ ಮತದಾನದ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಕರಪತ್ರ ಹಂಚಿ, ನೈತಿಕ ಮತದಾನಕ್ಕೆ ಪ್ರೇರೇಪಿಸಲಾಯಿತು, ಜಿಲ್ಲೆಯ ಸುಮಾರು 60ಕ್ಕೂ ಹೆಚ್ಚು ಹೆದ್ದಾರಿ ಫಲಕಗಳಲ್ಲ ಮತದಾರರ ಜಾಗೃತಿಗೆ ಫ್ಲೆಕ್ಸ್ ಬೋರ್ಡ್ ಅಳವಡಿಕೆ, ಆಟೋರಿಕ್ಷಾದವರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಆಟೋಗಳಿಗೆ ಜಾಗೃತಿ ಫ್ಲೆಕ್ಸ್ ಅಳವಡಿಕೆ, ಬೂತ್ ಮಟ್ಟದ ಅಧಿಕಾರಿಗಳಿಗೆ ಮತದಾರರ ಜಾಗೃತಿಗೆ ತರಬೇತಿ, ಕೊಪ್ಪಳ ನಗರದಲ್ಲಿ ಇದೇ ಪ್ರಥಮ ಬಾರಿಗೆ ಪ್ಯಾರಾಗ್ಲೈಡಿಂಗ್ ಹಾರಾಟ ಮೂಲಕ ಕರಪತ್ರ ವಿತರಣೆ, ನಗರ, ಸ್ಥಳೀಯ ಸಂಸ್ಥೆಗಳ ವಾಹನಗಳಿಗೆ ಮೈಕ್‌ಸಿಸ್ಟಂ ಅಳವಡಿಸಿ ಮತದಾರರ ಜಾಗೃತಿ ಗೀತೆಗಳ ಪ್ರಸಾರ ಮುಂತಾದ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.  ಈ ಜಾಗೃತಿ ಕಾರ್ಯಗಳಿಗೆ ವಾರ್ತಾ ಇಲಾಖೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜಕಲ್ಯಾಣ, ಆರೋಗ್ಯ, ಯುವಜನ ಸೇವಾ ಮತ್ತು ಕ್ರೀಡೆ, ಎನ್.ಎಸ್.ಎಸ್. ಮುಂತಾದ ಇಲಾಖೆಗಳ ಕೊಡುಗೆ ಅಮೂಲ್ಯವಾಗಿದೆ ಎಂದರು.

ಮತದಾನದ ಮಹತ್ವದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಅನೇಕ ಕ್ರಮಗಳು ಪರಿಣಾಮಕಾರಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾನವಾಗುವ ನಿರೀಕ್ಷೆ ಇದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಸ್ವೀಪ್ ವೀಕ್ಷಕರಾಗಿರುವ ರಾಜೀವ್ ನಾಯಕ್, ರಜಿತ್ ಚಂದ್ರನ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮತ ಚಲಾವಣೆ ಪವಿತ್ರ ಕರ್ತವ್ಯ : ಯಶಸ್ವಿ ಪ್ರಜಾಪ್ರಭುತ್ವಕ್ಕೆ ಮತದಾನ ಹಕ್ಕು ಬಳಸಿ

ಕೊಪ್ಪಳ ಮೇ. 02 (ಕ.ವಾ): ಭಾರತ ದೇಶ ಪ್ರಜಾಪ್ರಭುತ್ವ ಸಿದ್ಧಾಂತಗಳ ತಳಹದಿಯ ಮೇಲೆ ಸುಭದ್ರವಾಗಿ ನೆಲೆ ನಿಂತಿರುವ ದೇಶ.  ಇಲ್ಲಿ ಪ್ರಜೆಗಳೇ, ಪ್ರಭುಗಳು.  ನಮ್ಮನ್ನಾಳುವ ದೊರೆಗಳನ್ನು ಆಯ್ಕೆ ಮಾಡುವ ಹೊಣೆ ಎಲ್ಲ ಪ್ರಜೆಗಳ ಮೇಲಿದೆ.  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆ ಎಂಬುದು ಜನಪ್ರತಿನಿಧಿಗಳ ಆಯ್ಕೆಗಾಗಿ ರೂಪಿಸಲಾಗಿರುವ ಮಹತ್ವದ ವೇದಿಕೆ. ಮತದಾನ, ಮತದಾರನಿಗಿರುವ ಪ್ರಬಲ ಅಸ್ತ್ರ ಹಾಗೂ ಪವಿತ್ರ ಹಕ್ಕು.

ನಮ್ಮ ದೇಶದ ಸಂವಿಧಾನ ರೂಪಿಸಿರುವ ಮಹನೀಯರು, ದೇಶದ ಪ್ರತಿಯೊಬ್ಬ ಪ್ರಜೆಗೂ ಮಹತ್ವವಾದ ಕರ್ತವ್ಯವನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ನೀಡಿದ್ದಾರೆ.  ಇದು ಕೇವಲ ಹೊಣೆಗಾರಿಕೆ ಅಷ್ಟೇ ಅಲ್ಲ, ನಮ್ಮ ಪವಿತ್ರ ಹಕ್ಕು ಎಂಬುದನ್ನು ನಿರೂಪಿಸುವ ಜವಾಬ್ದಾರಿ ಎಲ್ಲ ಪ್ರಜೆಗಳ ಮೇಲಿದೆ.  ಭಾರತ ದೇಶ ಸ್ವಾತಂತ್ರ್ಯವಾದಾಗಿನಿಂದಲೂ ಅನೇಕ ಚುನಾವಣೆಗಳನ್ನು ಕಂಡಿದೆ.  ಪ್ರತಿ ಚುನಾವಣೆಗಳಲ್ಲೂ ತಮ್ಮ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕರ್ತವ್ಯವನ್ನು ಎಲ್ಲ ಮತದಾರರು ನಿರ್ವಹಿಸಿದ್ದಾರೆ.  ಚುನಾವಣೆಗಳು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು, ಚುನಾವಣಾ ಆಯೋಗ, ಪ್ರತಿ ಚುನಾವಣೆಯ ಸಂದರ್ಭದಲ್ಲೂ ಅನೇಕ ಸುಧಾರಣಾ ಕ್ರಮಗಳನ್ನು ಅನುಸರಿಸುತ್ತಾ ಬಂದಿದೆ.  ಮತದಾನ ಪದ್ಧತಿಯಲ್ಲಿಯೂ ಅನೇಕ ಸುಧಾರಣೆಗಳು ಸಾಗಿ ಬಂದಿದ್ದು, ಮತಪತ್ರಗಳ ಬಳಕೆಯ ಬದಲಿಗೆ ಇದೀಗ ವಿದ್ಯುನ್ಮಾನ ಮತಯಂತ್ರಗಳ ಬಳಕೆಯಾಗುತ್ತಿದೆ.  ಮತದಾನ ವ್ಯವಸ್ಥೆಯನ್ನು ಸುಧಾರಿಸಲಷ್ಟೇ ಚಿಂತನೆ ನಡೆಯುತ್ತಿದ್ದ ಕಾಲ ಇದೀಗ ಬದಲಾಗಿದ್ದು, ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸಿ, ಅವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ದಿಟ್ಟ ಹೆಜ್ಜೆಯನ್ನಿಟ್ಟಿದೆ.  ಇದನ್ನು ಇತ್ತೀಚೆಗಷ್ಟೇ ಗುಜರಾತ್ ರಾಜ್ಯದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಅನುಸರಿಸಿ, ಯಶಸ್ಸನ್ನೂ ಕಂಡಿದೆ.   ಈ ಯಶಸ್ವಿಯ ಅಲೆಯನ್ನು ಇದೀಗ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರಿಸಬೇಕು ಎನ್ನುವ ಛಲದಿಂದ, ಚುನಾವಣಾ ಆಯೋಗ ರಾಜ್ಯದಲ್ಲಿಯೂ ಮತದಾರರ ಜಾಗೃತಿಗೆ ’ಸ್ವೀಪ್’ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ’ ಕಾರ್ಯಕ್ರಮವನ್ನು ರೂಪಿಸಿ, ಅನುಷ್ಠಾನಕ್ಕೆ ತಂದಿದೆ.  ಕಾರ್ಯಕ್ರಮದ ಅನುಷ್ಠಾನಕ್ಕೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳನ್ನೊಳಗೊಂಡಂತೆ ಸಮಿತಿಯನ್ನು ರಚಿಸಿ, ಕಾರ್ಯರೂಪಕ್ಕೆ ಇಳಿಸಿದೆ. 

ಮತದಾರರ ನೋಂದಣಿ ಸಂಖ್ಯೆ ಹೆಚ್ಚಿಸುವುದು, ಅದರಲ್ಲೂ ಮುಖ್ಯವಾಗಿ ಹದಿಹರೆಯದ ಅಂದರೆ 18 ವರ್ಷ ತುಂಬಿರುವ ಯುವಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಒತ್ತಾಸೆಯೊಂದಿಗೆ ರಾಜ್ಯಾದ್ಯಂತ ಆಂದೋಲನವನ್ನೆ ಹಮ್ಮಿಕೊಳ್ಳಲಾಯಿತು.  ಇದೀಗ ಮತದಾರರಿಗೆ ತಮ್ಮ ಮತ ಎಷ್ಟು ಅಮೂಲ್ಯವಾದುದು, ಪ್ರತಿಯೊಂದು ಮತಕ್ಕೂ ಎಷ್ಟು ಮಹತ್ವವಿದೆ.  ಎಲ್ಲ ಮತದಾರರು ತಮ್ಮ ಮತವನ್ನು ತಪ್ಪದೆ ಏಕೆ ಚಲಾಯಿಸಬೇಕು ಎಂಬುದರ ಅರಿವು ಮೂಡಿಸಲು ಬಗೆ ಬಗೆಯ ಕಸರತ್ತನ್ನು ನಡೆಸಲಾಗುತ್ತಿದೆ.  ಹಲವಾರು ಸ್ಪರ್ಧೆಗಳು, ಅಭಿಯಾನ, ಜಾಗೃತಿ ಜಾಥಾ, ಪ್ರಭಾತಫೇರಿ, ಪ್ರತಿಜ್ಞಾ ವಿಧಿ ಬೋಧನೆ, ಹೀಗೆ ಹತ್ತು ಹಲವು ಕ್ರಮಗಳನ್ನು ಅನುಸರಿಸುವ ಮೂಲಕ ಮತದಾರರಲ್ಲಿನ ಕರ್ತವ್ಯದ ಮನಸ್ಸನ್ನು ಎಚ್ಚರಗೊಳಿಸುವುದು ಇದರ ಉದ್ದೇಶವಾಗಿದೆ.  ಚುನಾವಣೆಯಲ್ಲಿ ಕನಿಷ್ಟ ಪ್ರಮಾಣದ ಮತದಾನವಾದಲ್ಲಿ, ಆ ಕ್ಷೇತ್ರದ ಜನಪ್ರತಿನಿಧಿ ಎಲ್ಲ ಮತದಾರರ ಪ್ರತಿನಿಧಿ ಎನಿಸಿಕೊಳ್ಳುವುದು ಸಮಂಜಸವಲ್ಲವಾದ್ದರಿಂದ, ಎಲ್ಲ ಮತದಾರರೂ ತಪ್ಪದೆ ತಮ್ಮ ಮತ ಚಲಾಯಿಸುವ ಮೂಲಕ ತಮ್ಮ ಜನಪ್ರತಿನಿಧಿಯನ್ನು ಆಯ್ಕೆಗೊಳಿಸುವಂತಾಗಬೇಕು. 

ಮತದಾರರು ತಮ್ಮ ಅಮೂಲ್ಯವಾದ ಹಕ್ಕನ್ನು ಹಣಕ್ಕೆ, ಮದ್ಯದ ಚಟಕ್ಕೆ, ಅಥವಾ ಇನ್ನಾವುದೇ ಸಾಮಗ್ರಿಗಳ ಆಮಿಷಕ್ಕೆ ಮಾರಾಟ ಮಾಡಿಕೊಳ್ಳುವುದು, ಸಂವಿಧಾನಬದ್ಧ ಪವಿತ್ರ ಹಕ್ಕಿಗೆ ಅಪಮಾನ ಎಸಗಿದಂತೆ.  ಪವಿತ್ರವಾದ ಮತ ಚಲಾವಣೆಯ ಹಕ್ಕನ್ನು ಯೋಚಿಸಿ, ತಪ್ಪದೆ ಚಲಾಯಿಸಬೇಕು ಎನ್ನುತ್ತಾರೆ ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು.

ಮತ ಚಲಾಯಿಸದ ವ್ಯಕ್ತಿ, ಯಾವುದೇ ಆರೋಪ ಅಥವಾ ಬೇಡಿಕೆ ಸಲ್ಲಿಸಲು ನೈತಿಕವಾಗಿ ಹಕ್ಕನ್ನು ಕಳೆದುಕೊಂಡಂತೆ, ಮತದಾರ ತನ್ನ ಶಕ್ತಿ ಪ್ರದರ್ಶಿಸಲು ಚುನಾವಣೆಯೇ ಸೂಕ್ತ ವೇದಿಕೆಯಾಗಿದ್ದು, ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ, ಪ್ರಜಾಪ್ರಭುತ್ವಕ್ಕೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕು.  ಈ ಮೂಲಕ ಸುಭದ್ರ ದೇಶ ಕಟ್ಟಲು ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿದೆ ಎನ್ನುತ್ತಾರೆ ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು.

ಮತಯಂತ್ರ ಪೂಜೆಗೆ ಆಯೋಗ ನಿರ್ಬಂಧ

ಕೊಪ್ಪಳ ಮೇ. 02 (ಕ.ವಾ): ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ಯಾವುದೇ ಬಗೆಯ ಪೂಜೆ ಮಾಡುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ. ಚುನಾವಣೆಯ ಸಂದರ್ಭದಲ್ಲಿ ಮತದಾನ ಪ್ರಾರಂಭಕ್ಕೂ ಮುನ್ನ ಮತಯಂತ್ರಗಳಿಗೆ ಪೂಜೆ ನೆರವೇರಿಸುವುದು ಈ ಹಿಂದಿನ ಚುನಾವಣೆಗಳಲ್ಲಿ ಕಂಡುಬಂದಿದ್ದು, ಇಂತಹ ವಿಧಿ ವಿಧಾನಗಳಿಗೆ ಚುನಾವಣೆ ನಿಯಮಗಳಲ್ಲಿ ಅವಕಾಶವಿಲ್ಲ.  ಆದ್ದರಿಂದ ಈ ಬಾರಿಯ ಮತದಾನ ಸಂದರ್ಭದಲ್ಲಿ ಮತಯಂತ್ರಗಳಿಗೆ ಯಾವುದೇ ಅಭ್ಯರ್ಥಿಗಳು, ಏಜೆಂಟರು, ಸಿಬ್ಬಂದಿಗಳು ಯಾವುದೇ ಬಗೆಯ ಪೂಜೆ ನೆರವೇರಿಸುವುದನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರು ತಿಳಿಸಿದ್ದಾರೆ.

ಎಡಗೈ ಉಂಗುರ ಬೆರಳಿಗೆ ಮತದಾನದ ಗುರುತು

ಕೊಪ್ಪಳ ಮೇ. 02 (ಕ.ವಾ): ಈ ಬಾರಿಯ ವಿಧಾನಸಭೆ ಚುನಾವಣೆಗೆ ಮತದಾನ ಮಾಡುವ ಮತದಾರರ ಎಡಗೈ ಉಂಗುರ ಬೆರಳಿಗೆ ಅಳಿಸಲಾಗದ ಇಂಕಿನ ಗುರುತು ಹಾಕಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕಳೆದ ತಿಂಗಳ ಹಿಂದಷ್ಟೇ ಜರುಗಿದ್ದು, ಈ ಸಂದರ್ಭದಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಹಾಕಿರುವ ಮತದಾನದ ಗುರುತು ಇನ್ನೂ ಹಾಗೆಯೇ ಇರುವುದರಿಂದ, ಈ ಬಾರಿಯ ವಿಧಾನಸಭೆ ಚುನಾವಣೆಗೆ ಮತದಾರರಿಗೆ ಮತದಾನದ ಗುರುತನ್ನು ಎಡಗೈ ಉಂಗುರ ಬೆರಳಿಗೆ ಹಾಕಲು ಸೂಚನೆ ನೀಡಲಾಗಿದೆ.  ಅಲ್ಲದೆ ಒಂದು ವೇಳೆ ಯಾವುದೇ ಮರು ಚುನಾವಣೆ ನಡೆದಲ್ಲಿ, ಅಂತಹ ಚುನಾವಣೆಗೆ ಮತದಾರರ ಎಡಗೈ ಕಿರು ಬೆರಳಿಗೆ ಮತದಾನದ ಗುರುತು ಹಾಕಲು ಚುನಾವಣಾ ಆಯೋಗ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಚುನಾವಣೆ : ರಾತ್ರಿ ವೇಳೆ ನಿಷೇಧಾಜ್ಞೆ ಜಾರಿಗೆ

ಕೊಪ್ಪಳ ಮೇ. 02 (ಕ.ವಾ): ಪ್ರಸಕ್ತ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಮೇ. 05 ರವರೆಗೆ ಪ್ರತಿ ದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 06 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.

ಚುನಾವಣೆ ನಿಮಿತ್ಯ ಮತದಾನ ದಿನಾಂಕ ಸಮೀಪಿಸುತ್ತಿದ್ದು, ರಾತ್ರಿ ವೇಳೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಂದೆಡೆ ಸೇರಿ ಸಾರ್ವಜನಿಕರಿಗೆ ತೊಂದರೆ ನೀಡುವ ಸಂಭವ ಇರುತ್ತದೆ.  ಅಲ್ಲದೆ ಮತದಾರರಿಗೆ ಆಮಿಷ ಒಡ್ಡಲು ರಾತ್ರಿ ವೇಳೆ ವಸ್ತು, ಹಣ ಇತ್ಯಾದಿ ಹಂಚುವ ಸಾಧ್ಯತೆ ಇರುತ್ತದೆ.  ಚುನಾವಣೆಯನ್ನು ಮುಕ್ತ ಹಾಗೂ ನಿಸ್ಪಕ್ಷಪಾತವಾಗಿ ಕೈಗೊಳ್ಳುವ ಉದ್ದೇಶದಿಂದ ಸಿ.ಆರ್.ಪಿ.ಸಿ. 1983 ಕಲಂ 144 ರ ಪ್ರದತ್ತ ಅಧಿಕಾರ ಚಲಾಯಿಸಿ,  ಮೇ. 05 ರವರೆಗೆ ಪ್ರತಿ ದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 06 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಇದರನ್ವಯ ನಿಷೇಧಿತ ಅವಧಿಯಲ್ಲಿ ಸಾರ್ವಜನಿಕರು ನಾಲ್ಕು ಜನಕ್ಕಿಂತ ಹೆಚ್ಚಾಗಿ ಗುಂಪಾಗಿ ಸೇರಿ ತಿರುಗಾಡುವಂತಿಲ್ಲ.  ಎಲ್ಲ ಅಂಗಡಿ ಮುಂಗಟ್ಟುಗಳನ್ನು ರಾತ್ರಿ 10 ಗಂಟೆಯ ಒಳಗಾಗಿ ಮುಚ್ಚಬೇಕು.  ಯಾವುದೇ ರೀತಿಯ ಮಾರಕ ಶಸ್ತ್ರ ಗಳೊಂದಿಗೆ ತಿರುಗಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಚುನಾವಣೆ : ಮೇ.05 ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ

ಕೊಪ್ಪಳ ಮೇ.02(ಕರ್ನಾಟಕ ವಾರ್ತೆ):  ಜಿಲ್ಲೆಯಲ್ಲಿ ಮೇ.05 ರಂದು ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಜರುಗಲಿದ್ದು, ಕಾರ್ಮಿಕರು ಮತ ಚಲಾಯಿಸಲು ಅನುಕೂಲವಾಗುವಂತೆ ಅಂದು ಎಲ್ಲ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಪಿ.ಮುನಿಯಪ್ಪ ಅವರು ಜಿಲ್ಲೆಯ ಎಲ್ಲ ಕಾರ್ಖಾನೆಗಳು, ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.

ಮತದಾನದ ದಿನದಂದು ಎಲ್ಲಾ ಕಾರ್ಖಾನೆಗಳಳು, ಕೈಗಾರಿಕಾ ಸಂಸ್ಥೆಗಳು, ಅಂಗಡಿ, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕರ್ನಾಟಕ ಔದ್ಯಮಿಕ ಸಂಸ್ಥೆಗಳ ಮಾಲೀಕರು, ನಿಯೋಜಕರು (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯ್ದೆ 1963 ರ ಕಲಂ 3 (ಎ) ರನ್ವಯ ಮೇ.05 ರಂದು ಮತ ಚಲಾಯಿಸಲು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಪಿ.ಮುನಿಯಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಾಪುರ:ವಿಜಾಪುರ ಅಂಚೆ ಕಚೇರಿ ಮೂಲಕ ಚಿನ್ನದ ನಾಣ್ಯಗಳ ಮಾರಾಟ

ವಿಜಾಪುರ.ಮೇ,02- ಅಕ್ಷಯ ತೃತೀಯ ಪ್ರಯುಕ್ತ ಭಾರತೀಯ ಅಂಚೆ  ಇಂದಿನಿಂದ ಮೇ 30ರ ತನಕ ರಿಯಾಯಿತಿ ದರದಲ್ಲಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲಿದೆ. ಯಾವುದೇ ಗುಣಮಟ್ಟದ ಮತ್ತು ಯಾವುದೇ ಮೌಲ್ಯದ ಬಂಗಾರದ ನಾಣ್ಯಗಳ ಖರೀದಿ ಮೇಲೆ ಗ್ರಾಹಕರಿಗೆ ಶೇ.7ರಷ್ಟು ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ವಿಜಾಪುರ ಮುಖ್ಯ ಅಂಚೆ ಕಚೇರಿಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೇಕಡ 99.99ರಷ್ಟು ಪರಿಶುದ್ದದ 24 ಕ್ಯಾರೆಟ್‌ಗಳ ಸ್ವಿಸ್ ಚಿನ್ನದ ನಾಣ್ಯಗಳು 0.5 ಗ್ರಾಂ, 1 ಗ್ರಾಂ, 5 ಗ್ರಾಂ, 8 ಗ್ರಾಂ, 20 ಗ್ರಾಂ ಹಾಗೂ 50 ಗ್ರಾಂ ಮೌಲ್ಯದಲ್ಲಿ ಲಭಿಸಲಿದೆ. ಭಾರತೀಯ ಅಂಚೆಯ ವಿಶಿಷ್ಟ ಲಾಂಛನ ಹೊಂದಿರುವ ಈ ಬಂಗಾರದ ನಾಣ್ಯಗಳು ಜಿಪಿಒ ಸೇರಿದಂತೆ ಎಲ್ಲ ಮುಖ್ಯ ಅಂಚೆ ಕಚೇರಿಗಳಲ್ಲಿ ವಿಶೇಷ ಪ್ಯಾಕಿಂಗ್‌ನಲ್ಲಿ ದೊರೆಯಲಿದೆ ಎಂದು ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಅಧೀಕ್ಷಕರಾದ ಬಿ.ಆರ್. ನಣಜಗಿ ಮನವಿ ಮಾಡಿಕೊಂಡಿದ್ದಾರೆ.

ಸ್ವಯಂಪ್ರೇರಿತರಾಗಿ ಮತದಾನ ಮಾಡಿ: ಸಿಇಒ

ಮಂಗಳೂರು ಮೇ 2(ಕರ್ನಾಟಕವಾರ್ತೆ):ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ; ತಪ್ಪದೆ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು. ಅವರು ನಿನ್ನೆ ಸಂಜೆ ಮೀನುಗಾರಿಕಾ ದಕ್ಕೆಯಲ್ಲಿ ಮೀನುಗಾರರನ್ನು ಗಮನದಲ್ಲಿರಿಸಿ ಆಯೋಜಿಸಲಾದ ಮತದಾರರ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ನೂರಾರು ಮೀನುಗಾರ ಬಂಧುಗಳು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮತದಾನ ಮಾಡುವ ಬಗ್ಗೆ ಹಾಗೂ ಇತರರಿಗೆ  ಮತದಾನ ಮಾಡುವಂತೆ ಮನವೊಲಿಸುವ ಪ್ರಮಾಣವಚನ ಬೋಧಿಸಲಾಯಿತು. ನಿನ್ನೆಯಿಂದ ಐದು ದಿನಗಳ ಕಾಲ ’ವೋಟ್ ಮಿ’ ಎಂಬ ಸಂದೇಶದೊಂದಿಗೆ ದೋಣಿ ಸಮುದ್ರದಲ್ಲಿ ಸಂಚರಿಸಲಿದೆ.

ಮೀನುಗಾರರ ಬದುಕೇ ಸವಾಲುಗಳಿಂದೊಡಗೂಡಿದ ಸಾಹಸದ ಬದುಕು. ಮೀನುಗಾರರೆಲ್ಲರೂ ನೈತಿಕ ಮತದಾನಕ್ಕೆ ಆದ್ಯತೆ ನೀಡಿ ಮೇ ಐದರಂದು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂಬ ಸಂದೇಶ ನೀಡಿದರು. ಸಭೆಯಲ್ಲಿ ಯತೀಶ್ ಬೈಕಂಪಾಡಿ, ಹರೀಶ್ಚಂದ್ರ ಪುತ್ರನ್,ಅಬ್ದುಲ್ ರೆಹಮಾನ್,ಯೂತ್ ಕ್ಲಬ್‌ನ ಚೇತನ್ ಬೆಂಗ್ರೆ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಾದ ಸುರೇಶ್ ಕುಮಾರ್, ಸಹಾಯಕ ನಿರ್ದೇಶಕರಾದ ಪಾರ್ಶ್ವನಾಥ್ ಮುಂತಾದವರು ಭಾಗವಹಿಸಿದ್ದರು.

ವಿಶೇಷ ಲೇಖನ

ಮತ ಚಲಾವಣೆ ಪವಿತ್ರ ಕರ್ತವ್ಯ : ಯಶಸ್ವಿ ಪ್ರಜಾಪ್ರಭುತ್ವಕ್ಕೆ ಮತದಾನ ಹಕ್ಕು ಬಳಸಿ

ಭಾರತ ದೇಶ ಪ್ರಜಾಪ್ರಭುತ್ವ ಸಿದ್ಧಾಂತಗಳ ತಳಹದಿಯ ಮೇಲೆ ಸುಭದ್ರವಾಗಿ ನೆಲೆ ನಿಂತಿರುವ ದೇಶ.  ಇಲ್ಲಿ ಪ್ರಜೆಗಳೇ, ಪ್ರಭುಗಳು.  ನಮ್ಮನ್ನಾಳುವ ದೊರೆಗಳನ್ನು ಆಯ್ಕೆ ಮಾಡುವ ಹೊಣೆ ಎಲ್ಲ ಪ್ರಜೆಗಳ ಮೇಲಿದೆ.  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆ ಎಂಬುದು ಜನಪ್ರತಿನಿಧಿಗಳ ಆಯ್ಕೆಗಾಗಿ ರೂಪಿಸಲಾಗಿರುವ ಮಹತ್ವದ ವೇದಿಕೆ. ಮತದಾನ, ಮತದಾರನಿಗಿರುವ ಪ್ರಬಲ ಅಸ್ತ್ರ ಹಾಗೂ ಪವಿತ್ರ ಹಕ್ಕು.

ನಮ್ಮ ದೇಶದ ಸಂವಿಧಾನ ರೂಪಿಸಿರುವ ಮಹನೀಯರು, ದೇಶದ ಪ್ರತಿಯೊಬ್ಬ ಪ್ರಜೆಗೂ ಮಹತ್ವವಾದ ಕರ್ತವ್ಯವನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ನೀಡಿದ್ದಾರೆ.  ಇದು ಕೇವಲ ಹೊಣೆಗಾರಿಕೆ ಅಷ್ಟೇ ಅಲ್ಲ, ನಮ್ಮ ಪವಿತ್ರ ಹಕ್ಕು ಎಂಬುದನ್ನು ನಿರೂಪಿಸುವ ಜವಾಬ್ದಾರಿ ಎಲ್ಲ ಪ್ರಜೆಗಳ ಮೇಲಿದೆ.  ಭಾರತ ದೇಶ ಸ್ವಾತಂತ್ರ್ಯವಾದಾಗಿನಿಂದಲೂ ಅನೇಕ ಚುನಾವಣೆಗಳನ್ನು ಕಂಡಿದೆ.  ಪ್ರತಿ ಚುನಾವಣೆಗಳಲ್ಲೂ ತಮ್ಮ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕರ್ತವ್ಯವನ್ನು ಎಲ್ಲ ಮತದಾರರು ನಿರ್ವಹಿಸಿದ್ದಾರೆ.  ಚುನಾವಣೆಗಳು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು, ಚುನಾವಣಾ ಆಯೋಗ, ಪ್ರತಿ ಚುನಾವಣೆಯ ಸಂದರ್ಭದಲ್ಲೂ ಅನೇಕ ಸುಧಾರಣಾ ಕ್ರಮಗಳನ್ನು ಅನುಸರಿಸುತ್ತಾ ಬಂದಿದೆ.  ಮತದಾನ ಪದ್ಧತಿಯಲ್ಲಿಯೂ ಅನೇಕ ಸುಧಾರಣೆಗಳು ಸಾಗಿ ಬಂದಿದ್ದು, ಮತಪತ್ರಗಳ ಬಳಕೆಯ ಬದಲಿಗೆ ಇದೀಗ ವಿದ್ಯುನ್ಮಾನ ಮತಯಂತ್ರಗಳ ಬಳಕೆಯಾಗುತ್ತಿದೆ.  ಮತದಾನ ವ್ಯವಸ್ಥೆಯನ್ನು ಸುಧಾರಿಸಲಷ್ಟೇ ಚಿಂತನೆ ನಡೆಯುತ್ತಿದ್ದ ಕಾಲ ಇದೀಗ ಬದಲಾಗಿದ್ದು, ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸಿ, ಅವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ದಿಟ್ಟ ಹೆಜ್ಜೆಯನ್ನಿಟ್ಟಿದೆ.  ಇದನ್ನು ಇತ್ತೀಚೆಗಷ್ಟೇ ಗುಜರಾತ್ ರಾಜ್ಯದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಅನುಸರಿಸಿ, ಯಶಸ್ಸನ್ನೂ ಕಂಡಿದೆ.   ಈ ಯಶಸ್ವಿಯ ಅಲೆಯನ್ನು ಇದೀಗ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರಿಸಬೇಕು ಎನ್ನುವ ಛಲದಿಂದ, ಚುನಾವಣಾ ಆಯೋಗ ರಾಜ್ಯದಲ್ಲಿಯೂ ಮತದಾರರ ಜಾಗೃತಿಗೆ ’ಸ್ವೀಪ್’ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ’ ಕಾರ್ಯಕ್ರಮವನ್ನು ರೂಪಿಸಿ, ಅನುಷ್ಠಾನಕ್ಕೆ ತಂದಿದೆ.  ಕಾರ್ಯಕ್ರಮದ ಅನುಷ್ಠಾನಕ್ಕೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳನ್ನೊಳಗೊಂಡಂತೆ ಸಮಿತಿಯನ್ನು ರಚಿಸಿ, ಕಾರ್ಯರೂಪಕ್ಕೆ ಇಳಿಸಿದೆ. 

ಮತದಾರರ ನೋಂದಣಿ ಸಂಖ್ಯೆ ಹೆಚ್ಚಿಸುವುದು, ಅದರಲ್ಲೂ ಮುಖ್ಯವಾಗಿ ಹದಿಹರೆಯದ ಅಂದರೆ 18 ವರ್ಷ ತುಂಬಿರುವ ಯುವಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಒತ್ತಾಸೆಯೊಂದಿಗೆ ರಾಜ್ಯಾದ್ಯಂತ ಆಂದೋಲನವನ್ನೆ ಹಮ್ಮಿಕೊಳ್ಳಲಾಯಿತು.  ಇದೀಗ ಮತದಾರರಿಗೆ ತಮ್ಮ ಮತ ಎಷ್ಟು ಅಮೂಲ್ಯವಾದುದು, ಪ್ರತಿಯೊಂದು ಮತಕ್ಕೂ ಎಷ್ಟು ಮಹತ್ವವಿದೆ.  ಎಲ್ಲ ಮತದಾರರು ತಮ್ಮ ಮತವನ್ನು ತಪ್ಪದೆ ಏಕೆ ಚಲಾಯಿಸಬೇಕು ಎಂಬುದರ ಅರಿವು ಮೂಡಿಸಲು ಬಗೆ ಬಗೆಯ ಕಸರತ್ತನ್ನು ನಡೆಸಲಾಗುತ್ತಿದೆ.  ಹಲವಾರು ಸ್ಪರ್ಧೆಗಳು, ಅಭಿಯಾನ, ಜಾಗೃತಿ ಜಾಥಾ, ಪ್ರಭಾತಫೇರಿ, ಪ್ರತಿಜ್ಞಾ ವಿಧಿ ಬೋಧನೆ, ಹೀಗೆ ಹತ್ತು ಹಲವು ಕ್ರಮಗಳನ್ನು ಅನುಸರಿಸುವ ಮೂಲಕ ಮತದಾರರಲ್ಲಿನ ಕರ್ತವ್ಯದ ಮನಸ್ಸನ್ನು ಎಚ್ಚರಗೊಳಿಸುವುದು ಇದರ ಉದ್ದೇಶವಾಗಿದೆ.  ಚುನಾವಣೆಯಲ್ಲಿ ಕನಿಷ್ಟ ಪ್ರಮಾಣದ ಮತದಾನವಾದಲ್ಲಿ, ಆ ಕ್ಷೇತ್ರದ ಜನಪ್ರತಿನಿಧಿ ಎಲ್ಲ ಮತದಾರರ ಪ್ರತಿನಿಧಿ ಎನಿಸಿಕೊಳ್ಳುವುದು ಸಮಂಜಸವಲ್ಲವಾದ್ದರಿಂದ, ಎಲ್ಲ ಮತದಾರರೂ ತಪ್ಪದೆ ತಮ್ಮ ಮತ ಚಲಾಯಿಸುವ ಮೂಲಕ ತಮ್ಮ ಜನಪ್ರತಿನಿಧಿಯನ್ನು ಆಯ್ಕೆಗೊಳಿಸುವಂತಾಗಬೇಕು. 

ಮತದಾರರು ತಮ್ಮ ಅಮೂಲ್ಯವಾದ ಹಕ್ಕನ್ನು ಹಣಕ್ಕೆ, ಮದ್ಯದ ಚಟಕ್ಕೆ, ಅಥವಾ ಇನ್ನಾವುದೇ ಸಾಮಗ್ರಿಗಳ ಆಮಿಷಕ್ಕೆ ಮಾರಾಟ ಮಾಡಿಕೊಳ್ಳುವುದು, ಸಂವಿಧಾನಬದ್ಧ ಪವಿತ್ರ ಹಕ್ಕಿಗೆ ಅಪಮಾನ ಎಸಗಿದಂತೆ.  ಪವಿತ್ರವಾದ ಮತ ಚಲಾವಣೆಯ ಹಕ್ಕನ್ನು ಯೋಚಿಸಿ, ತಪ್ಪದೆ ಚಲಾಯಿಸಬೇಕು ಎನ್ನುತ್ತಾರೆ ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು.

ಮತ ಚಲಾಯಿಸದ ವ್ಯಕ್ತಿ, ಯಾವುದೇ ಆರೋಪ ಅಥವಾ ಬೇಡಿಕೆ ಸಲ್ಲಿಸಲು ನೈತಿಕವಾಗಿ ಹಕ್ಕನ್ನು ಕಳೆದುಕೊಂಡಂತೆ, ಮತದಾರ ತನ್ನ ಶಕ್ತಿ ಪ್ರದರ್ಶಿಸಲು ಚುನಾವಣೆಯೇ ಸೂಕ್ತ ವೇದಿಕೆಯಾಗಿದ್ದು, ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ, ಪ್ರಜಾಪ್ರಭುತ್ವಕ್ಕೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕು.  ಈ ಮೂಲಕ ಸುಭದ್ರ ದೇಶ ಕಟ್ಟಲು ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿದೆ ಎನ್ನುತ್ತಾರೆ ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು.

-  ತುಕಾರಾಂರಾವ್ ಬಿ.ವಿ.,

ಜಿಲ್ಲಾ ವಾರ್ತಾಧಿಕಾರಿ,

ಕೊಪ್ಪಳ.

ಮತದಾರರಲ್ಲದವರು ಕ್ಷೇತ್ರ ಬಿಡಲು ಸೂಚನೆ

ತುಮಕೂರು ಮೇ.2: ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126 ರಂತೆ ಮೇ 5, 2013ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರ ಮೇ 3, 2013ರ ಸಾಯಂಕಾಲ 5.00 ಗಂಟೆಗೆ ಮುಕ್ತಾಯವಾಗಲಿದ್ದು, ಮೇ 3, 2013ರ ಸಾಯಂಕಾಲ 5.00 ಗಂಟೆಯ ನಂತರ ಆಯಾ ಕ್ಷೇತ್ರದ ಮತದಾರರಲ್ಲದವರು, ಪ್ರಚಾರಕ್ಕೆ ಹೊರಗಿನಿಂದ ಬಂದ ಪಕ್ಷದ ಕಾರ್ಯಕರ್ತರು, ರಾಜಕೀಯ, ಮೆರವಣಿಗೆ, ಪ್ರಚಾರ ಕಾರ್ಯಗಳಿಗೆ ಆಗಮಿಸಿದಂತಹ ಕಾರ್ಯಕರ್ತರು ವಿಧಾನಸಭಾ ಕ್ಷೇತ್ರದಲ್ಲಿ ಇರತಕ್ಕದ್ದಲ್ಲವೆಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇಲ್ಕಾಣಿಸಿದವರು ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಹೋಗಿರುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಈ ಕೆಳಕಂಡಂತೆ ಕ್ರಮ ಜರುಗಿಸುವಂತೆ ತಿಳಿಸಲಾಗಿದೆ.

1) ಕಲ್ಯಾಣ ಮಂಟಪ, ಕಮ್ಯೂನಿಟಿ ಹಾಲ್, ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿ ವಿಧಾನಸಭಾ ಕ್ಷೇತ್ರದವರಲ್ಲದವರು ಇರುವರೆ ಎಂಬುದನ್ನು ಪರಿಶೀಲಿಸುವುದು, 2) ವಸತಿ ಗೃಹ, ಅತಿಥಿ ಗೃಹ ವಾಸ್ತವ್ಯದ ಮೇಲೆ ನಿಗಾ ಇಡುವುದು, 3) ಆಯಾ ಕ್ಷೇತ್ರಗಳ ಸರಹದ್ದುಗಳಲ್ಲಿ ನಿಯೋಜಿಸಿದ ಚೆಕ್‌ಪೋಸ್ಟ್ ಗಳಲ್ಲಿ ಹೊರಗಿನಿಂದ ಬರುವ ವಾಹನಗಳ ಸಂಚಾರದ ಮೇಲೆ ನಿಗಾವಹಿಸುವುದು, 4) ವ್ಯಕ್ತಿಗಳ / ಗುಂಪಿನ ಗುರುತಿನ ಬಗ್ಗೆ ಪರಿಶೀಲಿಸಿ, ಅವರು ಆ ಕ್ಷೇತ್ರದ ಮತದಾರರೇ ಅಥವಾ ಅಲ್ಲವೆ ಎಂಬುದನ್ನು ಪರಿಶೀಲನೆಗೆ ಒಳಪಡಿಸುವುದು.

ಮೇ 3, 2013ರ ಸಾಯಂಕಾಲ 5.00 ಗಂಟೆಯ ನಂತರ ಆಯಾ ಕ್ಷೇತ್ರದ ಮತದಾರರಲ್ಲದವರು ಆ ಕ್ಷೇತ್ರದಲ್ಲಿ ಉಳಿಯತಕ್ಕದ್ದಲ್ಲ.  ಭಾರತ ಚುನಾವಣಾ ಆಯೋಗದ ಈ ನಿರ್ದೇಶನವನ್ನು ಎಲ್ಲಾ ರಾಜಕೀಯ ಪಕ್ಷದವರೂ ಮತ್ತು ಸಾರ್ವಜನಿಕರು ಪಾಲಿಸಿ ಚುನಾವಣೆಯನ್ನು ಮುಕ್ತ / ನಿಸ್ಪಕ್ಷಪಾತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಕೋರಿದ್ದಾರೆ.

*****************

ಅಬಕಾರಿ ದಾಳಿ ವಿವರಗಳು

ತುಮಕೂರು ಮೇ.2: ವಿಧಾನಸಭಾ ಸಾರ್ವತ್ರಿಕ ಚುನಾವಣಾ ನೀತಿ ಸಂಹಿತೆ ಜಾರಿಯಾದ 20-3-2013 ರಿಂದ 30-4-2013ರವರೆಗೆ ತುಮಕೂರು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ 1195 ದಾಳಿ ನಡೆಸಿ, 63 ಘೋರ ಮೊಕದ್ದಮೆಗಳನ್ನು 33 ಸನ್ನದು ಷರತ್ತು ಉಲ್ಲಂಘನೆ ಮೊಕದ್ದಮೆಗಳನ್ನು ದಾಖಲಿಸಿ, 55 ಆರೋಪಿಗಳನ್ನು ಬಂಧಿಸಿ, 1757.540 ಲೀ. ಮದ್ಯ, 26.330 ಲೀ. ಬಿಯರ್ ಮತ್ತು 6 ಲೀ. ಸೇಂಧಿಯನ್ನು ವಶಪಡಿಸಿಕೊಂಡು, 9 ವಾಹನಗಳನ್ನು ಜಪ್ತಿಪಡಿಸಲಾಗಿದೆಯಲ್ಲದೆ, ಜಿಲ್ಲೆಗೆ ಹೊಂದಿಕೊಂಡ ಆಂದ್ರ ಪ್ರದೇಶದ ಗಡಿ ಭಾಗದಲ್ಲಿ ದಾಳಿ ಮಾಡಿ, 1600 ಲೀ. ಕೊಳೆಯನ್ನು ನಾಶಪಡಿಸಲಾಗಿದೆ ಎಂದು ಅಬಕಾರಿ ಉಪಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈನ್ ಶಾಪ್‌ಗಳ ಅಮಾನತ್ತು :-  ವೈನ್ ಶಾಪ್‌ಗಳಿಂದ ಮದ್ಯವನ್ನು ಪಡೆದು ಚುನಾವಣೆಗೆ ಹಂಚಲು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮದ್ಯವನ್ನು ವಶಪಡಿಸಿಕೊಂಡು, ಮೊಕದ್ದಮೆ ದಾಖಲು ಮಾಡಿ, ಅನಧೀಕೃತವಾಗಿ ಮದ್ಯವನ್ನು ಚುನಾವಣೆಗೆ ರವಾನಿಸಿದ್ದ ಈ ಕೆಳಕಂಡ ಸನ್ನದುಗಳನ್ನು ಅಮಾನತ್ತಿನಲ್ಲಿಡಲಾಗಿದೆ.

1) ಕೆ.ಎನ್. ನಾಗರಾಜು, ಸಿಎಲ್-2, ಸನ್ನದುದಾರರು, ಶಿರಾಟೌನ್, ಶ್ರೀದೇವಿ ವೈನ್ಸ್. 2) ಶ್ರೀಮತಿ ಎ.ಪಿ.ರತ್ನಾ, ಸಿಎಲ್-2, ಸನ್ನದುದಾರರು, ಪಾವಗಡ ತಾಲ್ಲೂಕಿನ ರವಿ ವೈನ್ಸ್, 3) ಕೆ.ಗಂಗಪ್ಪ, ಸಿಎಲ್-2, ಸನ್ನದುದಾರರು, ಕೆ.ಜಿ.ಗುಡಿ, ಗುಬ್ಬಿ ತಾಲ್ಲೂಕು. 4) ಇ.ಎಸ್. ನಂದಿನಿ, ಸಿಎಲ್-2, ಸನ್ನದುದಾರರು, ಮಧುಗಿರಿ ತಾಲ್ಲೂಕಿನ ನಂದಿನಿ ವೈನ್ಸ್, 5) ಹೆಚ್.ಆರ್. ವೆಂಕಟೇಶ್, ಸಿಎಲ್-9, ಸನ್ನದುದಾರರು, ತಿಪಟೂರು ತಾಲ್ಲೂಕಿನ ತಿರುಮಲ ಬಾರ್.

************

ಮದ್ಯ ದಾಸ್ತಾನು ವಶ

ಬೆಂಗಳೂರು: ಮೇ 02 :-  ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2013 ಹಾಗೂ ನೀತಿ ಸಂಹಿತೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು ಇದುವರೆಗೂ 2.10 ಲಕ್ಷ ಮೌಲ್ಯದ ಮದ್ಯ ದಾಸ್ತಾನು ಜಪ್ತಿ ಮಾಡಿದೆ.  ಇದರಲ್ಲಿ 19.22 ಲೀ ಬೀರ್, 96.250 ಲೀ ಬ್ರೀಜರ್, 190 ಲೀ ಭಾತಮ ಮದ್ಯ ಸಾರಿಯನ್ನು ವಶಪಡಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ 20 ಜನರನ್ನು ದಸ್ತಗಿರಿ ಮಾಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ಬೆಂಗಳೂರು ನಗರ ಜಿಲ್ಲೆ ಅಬಕಾರಿ ಇಲಾಖೆಯ ಉಪ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.

ರಾಣೆಬೆನ್ನೂರು ನಗರದಲ್ಲಿ ನಗದು ವಶ

ರಾಣೆಬೆನ್ನೂರು ನಗರದಲ್ಲಿ ಲಕ್ಷ್ಮಣ ಪೂಜಾರ ಎಂಬುವರು ಯಾವುದೇ ದಾಖಲೆಗಳಿಲ್ಲದೇ ಹಾಗೂ ಸಂಶಯಾಸ್ಪದವಾಗಿ ಸಾಗಿಸುತ್ತಿದ್ದ ರೂ. 90,000/- ಗಳ ವಶ ಹಾಗೂ ಅವರ ವಿರುದ್ದ ರಾಣೆಬೆನ್ನೂರು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆಯೆಂದು ಹಾವೇರಿ ಜಿಲ್ಲಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಚೆ ಕಚೇರಿಯಲ್ಲಿ ಬಂಗಾರದ ನಾಣ್ಯಗಳ ಮಾರಾಟ

ಹಾವೇರಿ:ಮೇ.02: ಭಾರತೀಯ ಅಂಚೆ ಇಲಾಖೆ ವತಿಯಿಂದ ರಾಣೇಬೆನ್ನೂರು ಮುಖ್ಯ ಅಂಚೆ ಕಚೇರಿಯಲ್ಲಿ 24 ಕ್ಯಾರೆಟ್ ಸ್ವಿಸ್(99.99% ಪರಿಶುದ್ಧ) ಬಂಗಾರದ ನಾಣ್ಯಗಳು  0.5, 1, 5, 8, 10, 20 ಹಾಗೂ 50 ಗ್ರಾಂಗಳಲ್ಲಿ ಮಾರಾಟಕ್ಕೆ ಲಭ್ಯವಿವೆ. ಈ ನಾಣ್ಯಗಳು ಭಾರತೀಯ ಅಂಚೆ ಇಲಾಖೆಯ ವಿಶೇಷ ಚಿನ್ಹೆಯನ್ನು ಹೊಂದಿರುತ್ತವೆ. ಮೇ 13 ರಂದು ಅಕ್ಷಯ ತೃತೀಯ ಪ್ರಯುಕ್ತ 7% ವಿಶೇಷ ರಿಯಾಯಿತಿ ಕೂಡಾ ಇರುತ್ತದೆ. ಗ್ರಾಹಕರು ಇದರ ಸಂಪೂರ್ಣ ಸದುಪಯೋಗ ಪಡೆಯಬೇಕೆಂದು ಹಾವೇರಿ ಹೆಡ್ ಪೋಸ್ಟ್ ಮಾಸ್ಟರ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ  ರಾಣೇಬೆನ್ನೂರು ಮುಖ್ಯ ಅಂಚೆ ಪಾಲಕ ಎಸ್.ಎನ್.ಕೊಪ್ಪಳ(ದೂರವಾಣಿ ಸಂಖ್ಯೆ:08373-266470) ಹಾಗೂ ಹಾವೇರಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಎಂ.ಎ.ಬಂಕಾಪುರ (ಮೊ:9972270258) ಅವರನ್ನು ಸಂಪರ್ಕಿಸಬಹುದು.

ಗುಂಪು ಕಾರ್ಯಕ್ರಮ ನಡೆಸದಂತೆ ಸೂಚನೆ

ಹಾವೇರಿ:ಮೇ.02: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರ ಅಂಗವಾಗಿ ಮೇ 3ರ ಮಧ್ಯಾಹ್ನದ ನಂತರ ಮತದಾರ ಜಾಗೃತಿಗಾಗಿ ಬೀದಿ ನಾಟಕ, ಜಾಥಾ ಹಾಗೂ ಇನ್ನಿತರ ಜಾಗೃತಿ ಕಾರ್ಯಕ್ರಮದಲ್ಲಿ ಜನರನ್ನು ಗುಂಪುಗೂಡಿಸಿ ನೆರವೇರಿಸುವ ಕಾರ್ಯಕ್ರಮಗಳನ್ನು ಮಾಡಬಾರದೆಂದು ಜಿಲ್ಲೆಯ ಎಲ್ಲಾ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ  ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೂ ಆದ  ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಉಮೇಶ ಕುಸುಗಲ್ಲ ಅವರು ಸೂಚನೆ ನೀಡಿದ್ದಾರೆ.

ಮದ್ಯಮಾರಾಟ ಹಾಗೂ ಮದ್ಯಪಾನ ನಿಷೇಧ

ಹಾವೇರಿ:ಮೇ.02: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರ ಹಿನ್ನೆಲೆಯಲ್ಲಿ ಮೇ 3 ರಂದು  ಸಂಜೆ 5 ಗಂಟೆಯಿಂದ  ಮೇ 5 ರಂದು ರಾತ್ರಿ 11 ಗಂಟೆವರೆಗೆ ಹಾಗೂ  ಮತ ಎಣಿಕೆ ದಿನವಾದ ಮೇ 8 ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಹಾವೇರಿ ಜಿಲ್ಲೆಯಾದ್ಯಂತ ಮದ್ಯಮಾರಾಟ, ಶೇಖರಣೆ ಹಾಗೂ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ  ವಿ.ಅನ್ಬುಕುಮಾರ ಅವರು ಆದೇಶ ಹೊರಡಿಸಿದ್ದಾರೆ. ಬಿಯರ್ ಬಾರ್‌ಗಳು, ಕ್ಲಬ್‌ಗಳು ಮತ್ತು ಮದ್ಯ ಡಿಪೋಗಳನ್ನು  ಮುಚ್ಚಲು ಸಹ ಆದೇಶಿಸಲಾಗಿದ್ದು,  ಈ ದಿನಗಳನ್ನು  ಶುಷ್ಕ ದಿನಗಳೆಂದು ಘೋಷಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯ ಪರೀಕ್ಷೆಗೆ 46 ವಿದ್ಯಾರ್ಥಿಗಳು ಗೈರು

ಹಾವೇರಿ:ಮೇ.02:    ಜಿಲ್ಲೆಯಲ್ಲಿ ಬುಧವಾರ ಜರುಗಿದ ಜೀವಶಾಸ್ತ್ರ ವಿಷಯದ ಸಿ.ಇ.ಟಿ. ಪರೀಕ್ಷೆಗೆ  ಹಾಜರಾಗಬೇಕಿದ್ದ 1,336 ವಿದ್ಯಾರ್ಥಿಗಳಲ್ಲಿ, 1,311 ವಿದ್ಯಾರ್ಥಿಗಳು ಹಾಜರಾಗಿದ್ದು, 25 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಮದ್ಯಾಹ್ನ ಜರುಗಿದ ಗಣಿತ ವಿಷಯದ 1,336 ವಿದ್ಯಾರ್ಥಿಗಳಲ್ಲಿ,  1,315 ವಿದ್ಯಾರ್ಥಿಗಳು ಹಾಜರಾಗಿದ್ದು, 21 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಪರೀಕ್ಷೆಗಳು ಸುವ್ಯವಸ್ಥಿತವಾಗಿ ಜರುಗಿದವೆಂದು ಹಾವೇರಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್. ಆರ್. ಕೊಣ್ಣೂರ ತಿಳಿಸಿದ್ದಾರೆ. 

ಅಂಚೆ ಮತಪತ್ರಗಳ ಮೂಲಕ ಮತದಾನ

ಹಾವೇರಿ:ಮೇ.02: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರ ಪ್ರಯುಕ್ತ ಚುನಾವಣಾ ಕರ್ತವ್ಯದ ಮೇಲೆ ತೆರಳಿರುವ ಪೋಲಿಸ್ ಸಿಬ್ಬಂದಿಗಳಿಗೆ ಜಿಲ್ಲಾಡಳಿತ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮೇ 1 ರಂದು ಅಂಚೆ ಮತಪತ್ರದ ವಿಶೇಷ ನೆರವು ಕೇಂದ್ರವನ್ನು ತೆರೆಯಲಾಗಿತ್ತು.

ಜಿಲ್ಲೆಯ ವಿವಿಧೆಡೆ ಚುನಾವಣಾ ಕರ್ತವ್ಯದ ಮೇಲೆ ತೆರಳಿರುವ 192 ಪೊಲೀಸ್ ಸಿಬ್ಬಂದಿಗಳು ವಿಶೇಷ ಆಸಕ್ತಿಯಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಅಂಚೆ ಮತಪತ್ರಕ್ಕಾಗಿ ನಮೂನೆ 12ನ್ನು ಸಲ್ಲಿಸಿದ ಇನ್ನುಳಿದ ಸಿಬ್ಬಂದಿಗಳಿಗೆ ಅಂಚೆಯ ಮೂಲಕ ಮತಪತ್ರ ರವಾನಿಸಿ, ಮತ ಚಲಾಯಿಸಲು ಅನುಕೂಲ ಮಾಡಿಕೊಡಲಾಗುವುದೆಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ಅವರು ತಿಳಿಸಿದ್ದಾರೆ.

ಮೇ 3: ಬಹಿರಂಗ ಪ್ರಚಾರ ಮುಕ್ತಾಯ

ಹಾವೇರಿ:ಮೇ.02: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ವಿಧಿಗಳನ್ವಯ ಮೇ 3 ರಂದು ಸಾಯಂಕಾಲ 5 ಗಂಟೆಗೆ ಬಹಿರಂಗ ಪ್ರಚಾರಗಳನ್ನು  ಎಲ್ಲ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು  ಮುಕ್ತಾಯಗೊಳಿಸಬೇಕು.

ಆಯಾ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಡದಿರುವ ವ್ಯಕ್ತಿಗಳು ಹಾಗೂ ಆಯಾ ಕ್ಷೇತ್ರಗಳ ರಹವಾಸಿಗಳಲ್ಲದವರು ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಇರುವಂತಿಲ್ಲ. ಈ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ಅನ್ಬುಕುಮಾರ ಅವರು ತಿಳಿಸಿದ್ದಾರೆ.

ಚುನಾವಣೆ ಸಿಬ್ಬಂದಿಗೆ ಸಾರಿಗೆ ಸೌಲಭ್ಯ

ಹಾವೇರಿ:ಮೇ.02: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರ ಹಿನ್ನೆಲೆಯಲ್ಲಿ ಮತದಾನ ಕಾರ್ಯಕ್ಕೆ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ ಹಾಗೂ ಪೋಲಿಂಗ್ ಅಧಿಕಾರಿಗಳನ್ನು ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ನಿಯೋಜಿಸಲಾಗಿದೆ. ಈ ಎಲ್ಲ ಸಿಬ್ಬಂದಿಗಳಿಗೆ ಅವರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಿಂದ ನಿಯೋಜಿಸಲಾದ ತಾಲೂಕಿಗೆ ಹೋಗಲು ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಕಾರಣ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿಗಧಿಪಡಿಸಲಾದ ಮಸ್ಟರಿಂಗ್ ಕೇಂದ್ರಗಳಲ್ಲಿ ಎಲ್ಲ ಅಧಿಕಾರಿಗಳು ಮೇ 4 ರಂದು ಬೆಳಿಗ್ಗ 6 ಗಂಟೆಗೆ ಹಾಜರಿದ್ದು, ನಿಯೋಜಿಸಲಾದ ವಿಧಾನಸಭಾ ಕ್ಷೇತ್ರಗಳಿಗೆ ತೆರಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ಅನ್ಬುಕುಮಾರ ಅವರು ತಿಳಿಸಿದ್ದಾರೆ.

ಕೊಡುಗೆ ಕೊಡುವುದು ಮಾತ್ರವಲ್ಲ, ಪಡೆಯುವುದೂ ಅಪರಾಧ : ಝಾ

ಬೆಂಗಳೂರು ಮೇ 2 (ಕರ್ನಾಟಕ ವಾರ್ತೆ): ರಾಜ್ಯ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಮತದಾರರ ಓಲೈಸಲು ನಗದು ಹಾಗೂ ಕೊಡುಗೆಗಳ ಕೊಡುವುದು ಮಾತ್ರವಲ್ಲ, ಅವುಗಳನ್ನು ಪಡೆಯುವುದೂ ಕೂಡಾ ಶಿಕ್ಷಾರ್ಹ ಅಪರಾಧ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಶ್ರೀ ಅನಿಲ್ ಕುಮಾರ್ ಝಾ ಅವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಯಾವುದೇ ಪಕ್ಷ ಅಥವಾ ವ್ಯಕ್ತಿ ಆಮಿಷ ಒಡ್ಡಿದ ಸಂದರ್ಭದಲ್ಲಿ ಅಂತಹ ಪ್ರಕರಣಗಳ ಕುರಿತು ದೂರು ಸಲ್ಲಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಹದ್ದಿನ ಕಣ್ಣು !

ಮತದಾರ ಓಲೈಸಲು ನಗದು, ಮದ್ಯ ಅಥವಾ ಕೊಡುಗೆಗಳ ಕೊಡುವ ಕುರಿತ ರಾಜಕೀಯ ಪಕ್ಷಗಳ ಹಾಗೂ ರಾಜಕಾರಣಿಗಳ ಚಲನ-ವಲನಗಳ ಕುರಿತು ಚುನಾವಣಾ ವಿಚಕ್ಷಣಾ ದಳಗಳು ಮುಂದಿನ ಮೂರು-ದಿನಗಳ ಅವಧಿಯಲ್ಲಿ ಹದ್ದಿನ ಕಣ್ಣಿರಿಸಲಿದೆ.

ಕಠಿಣ ಕ್ರಮ !

ಮತ ಚಲಾಯಿಸುವ ಸಂದರ್ಭದಲ್ಲಿ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿರಬೇಕು. ಒಂದಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನಮೂದಾಗಿರುವ ಪ್ರಕರಣಗಳಿದ್ದಲ್ಲಿ, ಅಂತಹ ಮತದಾರರು ಒಂದು ಕಡೆ ಮಾತ್ರ ಮತ ಚಲಾಯಿಸಬೇಕು. ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಲು ಪ್ರಯತ್ನಿಸಿದಲ್ಲಿ ಅಂತಹವರಿಗೆ ಒಂದು ವರ್ಷ ಸೆರೆವಾಸಕ್ಕೆ ಒಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಅಂತೆಯೇ, ಮತ್ತೊಬ್ಬರ ಹೆಸರಿನಲ್ಲಿ ಮತದಾನ ಮಾಡುವ ನಕಲಿ ಮತದಾರರನ್ನೂ ಒಂದು ವರ್ಷ ಜೈಲು ಶಿಕ್ಷಗೆ ಗುರಿಪಡಿಸಬಹುದು ಎಂಬುದನ್ನು ಅವರು ಈ ಸಂದರ್ಭದಲ್ಲಿ ಮನವರಿಕೆ ಮಾಡಿದರು.

ಬಹಿರಂಗ ಪ್ರಚಾರ ಅಂತ್ಯ !

ಮೇ 3 ರಂದು ಸಂಜೆ 5-00 ಗಂಟೆಗೆ ಬಹಿರಂಗ  ಪ್ರಚಾರ ಅಂತ್ಯಗೊಳ್ಳಲಿದೆ ಎಂಬುದನ್ನೂ ಅವರು ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಧುರೀಣರ ಗಮನಕ್ಕೆ ತಂದರು. ಅಲ್ಲದೆ, ಇದರ ಉಲ್ಲಂಘನಾ ಪ್ರಕರಣಗಳನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಗಮನಕ್ಕೆ ತರುವಂತೆ ಅವರು ಸಾರ್ವಜನಿಕರಲ್ಲಿ ವಿನಂತಿಸಿದರು.

ಅಂಚೆ ಮತದಾನದಲ್ಲಿ ದಾಖಲೆ

ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಅಂಚೆ ಮತದಾನವಾಗಿರುವುದು ಈ ಬಾರಿಯ ಚುನಾವಣಾ ವಿಶೇಷ ಹಾಗೂ ದಾಖಲೆಯಾಗಿದೆ ಎಂದ ಶ್ರೀ ಅನಿಲ್ ಕುಮಾರ್ ಝಾ ಅವರು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಇತರ ಅಧಿಕಾರಿ ಹಾಗೂ ಸಿಬ್ಬಂದಿಯೂ ಕೂಡಾ ಅಂಚೆ ಮತದಾನ ಮಾಡಲು ಅವಕಾಶ ಕೋರಿದ್ದಾರೆ ಎಂದರು.

ಅಕ್ರಮ ನಗದು ವಶ

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ  ಕೃಷ್ಣರಾಜಪುರದಲ್ಲಿ 15 ಲಕ್ಷ ರೂ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ 7.5 ಲಕ್ಷ ರೂ, ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಎರಡು ಲಕ್ಷ ರೂ     ಮತ್ತು ಮುಳಬಾಗಿಲು ಬಳಿ ಒಂದು ಲಕ್ಷ ರೂ, ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಒಂದು ಲಕ್ಷ ರೂ, ಬಳ್ಳಾರಿ ಜಿಲ್ಲೆಯಲ್ಲಿ 12 ಲಕ್ಷ ರೂ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮೂರು ಲಕ್ಷ ರೂ, ನಗದನ್ನು ಗುರುವಾರ ಚುನಾವಣಾ ವಿಚಕ್ಷಣಾ ದಳ ವಶಪಡಿಸಿಕೊಂಡು, ಮುಂದಿನ ಕ್ರಮ ಜರುಗಿಸಿದೆ ಎಂದು ತಿಳಿಸಿದ ಅವರು ಈವರೆಗೆ ಒಟ್ಟು 14.42 ಕೋಟಿ ರೂ ನಗದು ಮುಟ್ಟುಗೋಲು ಹಾಕಿ ಕೊಳ್ಳಲಾಗಿದೆ ಎಂದು ವಿವರಿಸಿದರು.

ಇದೇ ದಿನ ಬೆಂಗಳೂರು ನಗರದ ಜಿಲ್ಲೆಯ ಚಾಮರಾಜಪೇಟೆಯಲ್ಲಿ 66 ಸೀರೆಗಳು ಮತ್ತು ವ್ಯಾನಿಟಿ ಬ್ಯಾಗ್‌ಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 370 ಟೀ-ಶರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂತೆಯೇ, ಬೆಂಗಳೂರು ನಗರದ ಜಿಲ್ಲೆಯ ಬೊಮ್ಮನ ಹಳ್ಳಿಯಲ್ಲಿ 40 ಪೆಟ್ಟಿಗೆ ಮದ್ಯ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಎರಡು ಲಕ್ಷ ರೂ ಮೌಲ್ಯದ ಮದ್ಯ ಹಾಗೂ ತುಮಕೂರು ಜಿಲ್ಲೆಯಲ್ಲಿ  50,000 ಲೀಟರ್ ಮದ್ಯ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈವರೆಗೆ ವಶಪಡಿಸಿಕೊಂಡಿರುವ ಮದ್ಯದ ಒಟ್ಟಾರೆ ಮೌಲ್ಯ 4.79 ಕೋಟಿ ರೂ ಆಗಿದೆ

ಪ್ರಕರಣಗಳ ವಿವರ

ಈವರೆಗೆ ದಾಖಲಾದ ಅಕ್ರಮ ನಗದು ವಶಪಡಿಸಕೊಂಡ ಪ್ರಕರಣಗಳ ಸಂಖ್ಯೆ 198, ಅಕ್ರಮ ಮದ್ಯ ದಾಸ್ತಾನು ಪ್ರಕರಣಗಳ ಸಂಖ್ಯೆ 760 ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನಾ ಪ್ರಕರಣಗಳ ಸಂಖ್ಯೆ 905 ಎಂದು ಅವರು ಅಂಕಿ-ಅಂಶ ಒದಗಿಸಿದರು.