State News 20-04-2013

Saturday, April 20th, 2013

ಕರ್ನಾಟಕ ಸರ್ಕಾರ

ವಾರ್ತಾ ಇಲಾಖೆ

ನಂ.17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ ಬೆಂಗಳೂರು 560 001.

ದೂ. 080-22028032/34/ ಫ್ಯಾಕ್ಸ್ 22028041

ದಿನಾಂಕ: 20-04-2013

ಪತ್ರಿಕಾ ಆಮಂತ್ರಣ

ಕ್ರಮ ಸಂಖ್ಯೆ

ಕಾರ್ಯಕ್ರಮಗಳ ವಿವರ

ದಿನಾಂಕ, ವೇಳೆ

ಸ್ಥಳ

1 18th Foundation Day of KAPPEC Inauguration: Dr. V. Chandrashekar, IAS., Commissioner, Agriculture Dept. of Government, Presided by : Dr. G.K. Vasanthkumar, Additional Secretary, Agriculture Department, Special Lecture: Dr. Alagasundaram Director, Indian Institute of Crop Processing Technology (IICPT) 22-4-2013 Monday 10-30 A.M. The Senate Hall, The Capital Hotel Raj Bhavan Road, Bangalore
2 ಪತ್ರಿಕಾಗೋಷ್ಠಿ: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಶ್ರೀ ಅನಿಲ್ಕುಮಾರ್ ಝಾ ಅವರು ರಾಜ್ಯ ವಿಧಾನ ಸಭಾ ಚುನಾವಣೆ ಕುರಿತಂತೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 22-04-2013 ಸೋಮವಾರ ಸಂಜೆ 5-30 ಗಂಟೆಗೆ ನಿರ್ವಾಚನ ನಿಲಯ, ಮುಖ್ಯ ಚುನಾವಣಾಧಿಕಾರಿ ಕಚೇರಿ, ಶೇಷಾದ್ರಿ ರಸ್ತೆ, ಬೆಂಗಳೂರು - 560 001.

ನಿರ್ದೇಶಕರ ಪರವಾಗಿ

ರಂಗಮಂಚವೇರಿದ ಮದುಮಗಳು

ಬೆಂಗಳೂರು, ಏಪ್ರಿಲ್ 20 (ಕರ್ನಾಟಕ ವಾರ್ತೆ):  ಗುರುವಾರ ರಾತ್ರಿ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಮಹಾಕವಿ ಕುವೆಂಪುರವರ ಮೇರುಕೃತಿ ಮಲೆಗಳಲ್ಲಿ ಮದುಮಗಳು ರಂಗಮಂಚಕ್ಕೇರಿದ ಸಂಭ್ರಮ-ಸಡಗರ.  ಸುತ್ತಿ ಸುತ್ತಿ ಸುಳಿದಾಡುತ್ತಿತ್ತು ಗುತ್ತಿ ಮತ್ತು ಅವನ ಸಾಕು ನಾಯಿ ಹುಲಿಯಾ ಕಲಾಗ್ರಾಮದ ನಾಲ್ಕು ರಂಗ ವೇದಿಕೆಗಳಾದ ಕೆರೆಯುಗಣರಂಗ, ಬಯಲುರಂಗ, ಬಿದಿರುಮೇಳರಂಗ ಮತ್ತು ಹೊಂಗೆರಂಗದಲ್ಲಿ ತಾವೇ ತಾವಾಗಿ ವಿಜೃಂಬಿಸುತ್ತಿದ್ದರು.  ಹುಲಿಕಲ್ ನೆತ್ತಿಯ ಮೇಲೆ ಸುಬ್ಬಣ್ಣ ಹೆಗಡೆಯವರ ಹೃದಯ ವಿದ್ರಾವಕವಾದ ಸೋಲಿನ ಘಟನೆಗಳು ಪ್ರೇಕ್ಷಕರ ಕಣ್ಣಂಚನ್ನು ತೇವಗೊಳಿಸುತ್ತಿದ್ದವು.  ಇದೇ ರಾತ್ರಿ ರಂಗಾಸಕ್ತರ ಕಣ್ಣುಗಳಿಗೆ ದಣಿವರಿಯದ ಆನಂದ.

ಕಳೆದ ಎರಡು ತಿಂಗಳುಗಳಿಂದ ’ಮಲೆಗಳಲ್ಲಿ ಮದುಮಗಳು’ ರಂಗರೂಪದ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತದೆ ಎನ್ನುವ ಸುದ್ದಿಯೆ ನಗರದ ರಂಗಾಸಕ್ತರಿಗೆ ಕೂತೂಹಲದ ಕೇಂದ್ರವಾಗಿತ್ತು.  ಹೆಚ್ಚಿನ ಆಡಂಬರದ ಔಪಚಾರಿಕ ಉದ್ಘಾಟನೆಯಿಲ್ಲದ ಸರಳವಾಗಿ ರಂಗಮಂಚಕ್ಕೇರಿದ ಮದುಮಗಳು ನಾಟಕದ ಪ್ರಥಮ ಪ್ರದರ್ಶನಕ್ಕೆ ಸುಮಾರು 500 ಮಂದಿ ಆಗಮಿಸಿದ್ದರು. ಏಪ್ರಿಲ್ 18 ರ ಗುರುವಾರ ರಾತ್ರಿ 8-30 ಕ್ಕೆ ಆರಂಭವಾದ ನಾಟಕ ಶುಕ್ರವಾರ ಬೆಳಗಿನ ಜಾವ 5-30 ಕ್ಕೆ ಯಶಸ್ವಿಯಾಗಿ ಪೂರ್ಣಗೊಂಡಾಗ ಸಂಘಟಕರಿಗೆ ಎಲ್ಲಿಲ್ಲದ ಆನಂದ.  ಕಳೆದ ಒಂದೂವರೆ ತಿಂಗಳಿನಿಂದ ರಂಗ ತಾಲೀಮಿನಲ್ಲಿ ತೊಡಗಿದ್ದ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಕಲಾವಿದರಲ್ಲಿ ರಂಗ ಪ್ರಸವದ ನಿರಾಳತೆ ತುಂಬಿ ತುಳುಕುತ್ತಿತ್ತು.

ಜೋಗಿ ಜಂಗಮರ ಪ್ರವೇಶದೊಂದಿಗೆ ಕೆರೆಯಂಗಳದಲ್ಲಿ ರಾತ್ರಿ 8-30 ಕ್ಕೆ ಆರಂಭವಾದ ನಾಟಕ ಸುಮಾರು ಎರಡೂವರೆ ತಾಸುಗಳ ಕಾಲ ಮಲೆನಾಡಿನ ಜನಜೀವನವನ್ನು ಬಿಂಬಿಸುವ ಹಾಗೂ ನಾಟಕ ಪಾತ್ರಗಳನ್ನು ಪರಿಚಯಿಸುವ ವಿಸ್ತಾರವಾದ ಕ್ಯಾನ್‌ವಾಸ್ ಆಗಿತ್ತು.  ಹದಿನೈದು ಇಪ್ಪತ್ತು  ನಿಮಿಷಗಳ ಬಿಡುವಿನ ನಂತರ ಬಯಲು ರಂಗಮಂದಿರದಲ್ಲಿ ನಾಟಕದ ಪಾತ್ರಗಳ ಪೋಷಣೆ ಮತ್ತು ಕಥೆ ಸಾಗುವ ದಿಕ್ಕಿಗೆ ಹೆಚ್ಚು ಒತ್ತು ನೀಡಲಾಗಿತ್ತು.  ನಾಯಿ ಗುತ್ತಿ ತನ್ನ ಪ್ರೇಯಸಿ ತಿಮ್ಮಿಯನ್ನು ಅಪಹರಿಸಿಕೊಂಡು ಹೋಗುವ ದೃಶ್ಯದಿಂದ ಆರಂಭಗೊಂಡ ಈ ರಂಗಪ್ರಸಂಗದಲ್ಲಿ ಕರಿಮೀನು ಸಾರು ಹೊನ್ನವಳ್ಳಿ ಹೊಡೆತ, ನಾಗಕ್ಕ ವೆಂಕಣ್ಣನಾಯ್ಕರ ಕೂಡಿಕೆ ಸಂಬಂಧಗಳು ಬಿಂಬಿತವಾಗಿ  ನಡುರಾತ್ರಿ ಮುಗಿಯುವ ವೇಳೆಗೆ  ಬಿದಿರು ರಂಗಕ್ಕೆ ತನ್ನ ಮುಂದಿನ ಪಯಣ ಬೆಳೆಸಿತು.  ಸುಬ್ಬಣ್ಣ ಹೆಗಡೆಯವರು ಹುಲಿಕಲ್ ಘಾಟಿಯೇರುತ್ತಾ ಕಾಣಿಯಾದ ತನ್ನ ಮಗನನ್ನು ಹುಡುಕುತ್ತಾ ಬದುಕಿನ ನೋವಿನ ಘಟನೆಗಳನ್ನೆಲ್ಲಾ ನೆನೆಸಿಕೊಂಡು ದು:ಖ ತೋಡಿಕೊಳ್ಳುವ ಪ್ರಸಂಗ ಹಾಗೂ   ಅಂತಕ್ಕ ಶೆಟ್ಟಿಯ ಮಗಳು ಕಾವೇರಿಯ ಸಾಮ ಹೀಗೆ ದುರಂತಗಳ ನೋಟವನ್ನು ನೀಡುತ್ತಲೇ ಕ್ರೈಸ್ತಪಾದ್ರಿ ಜೀವರತ್ನಯ್ಯ ಹೊಸದಾಗಿ ಶಾಲಾ ಕಟ್ಟಡವನ್ನು ನಿರ್ಮಿಸುವ ದೃಶ್ಯಗಳು ಬಿದಿರುರಂಗದಲ್ಲಿ ಪ್ರಧಾನವಾಗಿವೆ.

ಅಂತಿಮವಾಗಿ ಹೊಂಗೆ ರಂಗದಲ್ಲಿ ಮದುವೆ ಹುಡುಗಿ ಹೂವಮ್ಮನ ಅಪಹರಣ, ಮುಕುಂದಯ್ಯ ಹೂವಮ್ಮನ ಮದುವೆಯ ದೃಶ್ಯಗಳು ವಿಜೃಂಬಿಸುತ್ತವೆ.  ನಾಟಕದ ಉದ್ದಕ್ಕೂ ರಂಗದ ತುಂಬೆಲ್ಲಾ ಲವಲವಿಕೆಯಿಂದ ಜಿಗಿದಾಡುತ್ತಿದ್ದ ಗುತ್ತಿಯ ನಾಯಿ ಹುಲಿಯಾ ನದಿಯ ನೆರೆಯಲ್ಲಿ ಕೊಚ್ಚಿಕೊಂಡು ಹೋಗುವ ದೃಶ್ಯದೊಂದಿಗೆ ನಾಟಕಕ್ಕೆ ತೆರೆಬೀಳುತ್ತದೆ. 

ಮತದಾನ ದಿನದಂದು ವೇತನ ಸಹಿತ ರಜೆ ನೀಡಲು ಸೂಚನೆ

ಬೆಂಗಳೂರು, ಏಪ್ರಿಲ್ 20 (ಕರ್ನಾಟಕ ವಾರ್ತೆ): ದಿನಾಂಕ 5-5-2013 ರ ಭಾನುವಾರದಂದು ಕರ್ನಾಟಕ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು ರಾಜ್ಯದಲ್ಲಿನ ಎಲ್ಲಾ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ರಾಜ್ಯದಲ್ಲಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು  ಇನ್ನಿತರ ಎಸ್ಟಾಬ್ಲಿಷ್‌ಮೆಂಟ್‌ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ನೆಗೋಷಿಯೇಬಲ್ ಇನ್ಸ್ಟ್ರೂಮೆಂಟ್ಸ್ ಆಕ್ಟ್ರ 1881 ರಡಿ ಮತ್ತು ರೆಪ್ರಸೆಂಟೆಷನ್ ಆಫ್ ಪೀಪಲ್ ಆಕ್ಟ್ 1951 ರಡಿ ವೇತನ ಸಹಿತ ರಜೆ ನೀಡಲು ಸರ್ಕಾರದಿಂದ ಸೂಚನೆ ನೀಡಲಾಗಿದೆ.

1 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

ಬೆಂಗಳೂರು, ಏಪ್ರಿಲ್ 20 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲೆಯ ಅಬಕಾರಿ ಸಿಬ್ಬಂದಿಗಳು ಮತ್ತು ಕುಂದಾಪುರ ಅಬಕಾರಿ ವಲಯ ನಿರೀಕ್ಷಕರವರಿಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ, ಕುಂದಾಪುರ ಹೊರ ವಲಯದಲ್ಲಿರುವ ಹೋಟೇಲ್ ಜ್ಯುವೆಲ್ ಪಾರ್ಕ್ ಎಂಬ ಖಾಸಗಿ ಹೋಟೇಲ್‌ನಲ್ಲಿ  ತಂಗಿದ್ದ ಶ್ರೀ ಸುಧೀರ್ ಹೆಗ್ಡೆ, ಖಾವೀಕೆರಿ ಹಾಗೂ ಶ್ರೀ ದಿವಾಕರ್ ನಾರಾಯಣ ದೇವಾಡಿಗ ಎಂಬುವವರ ಬಳಿ 1 ಕೆ.ಜಿ. ಹೆರಾಯಿನ್ (ಮಾದಕ ವಸ್ತು) ಇರುವುದನ್ನು ಪತ್ತೆ ಮಾಡಿ, ಎನ್.ಡಿ.ಪಿ.ಎಸ್. ಕಾಯಿದೆಯನ್ವಯ ಮೊಕದ್ದಮೆಯನ್ನು ದಾಖಲಿಸಿ, 1 ಕೆ.ಜಿ. ಹೆರಾಯಿನ್‌ನ್ನು ತಾಲ್ಲೂಕು ತಹಶೀಲ್ದಾರರ ಸಮಕ್ಷಮ ಜಪ್ತಿ ವಶಪಡಿಸಿಕೊಂಡ ಇಬ್ಬರು ವ್ಯಕ್ತಿಗಳನ್ನು ದಸ್ತಗಿರಿ ಮಾಡಲಾಗಿದೆ.  ಜಫ್ತಿಯಾದ ವಸ್ತುವಿನ ಮೌಲ್ಯ 1 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಅಬಕಾರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಡಾ: ರಾಜ್‌ಕುಮಾರ್ 85 ನೇ ಜನ್ಮದಿನಾಚರಣೆ

ಬೆಂಗಳೂರು, ಏಪ್ರಿಲ್ 20 (ಕರ್ನಾಟಕ ವಾರ್ತೆ):  ಡಾ: ರಾಜ್‌ಕುಮಾರ್ ಅವರ 85 ನೇ ಜನ್ಮ ದಿನಾಚರಣೆಯನ್ನು ಏಪ್ರಿಲ್ 24 ರಂದು ಸಂಜೆ 6-30 ಗಂಟೆಗೆ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದ್ದು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀ ಹಂಸಲೇಖ ಅವರು ಉದ್ಘಾಟಿಸುವರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಹಿರಿಯ ನಿರ್ಮಾಪಕಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್, ಖ್ಯಾತ ಚಲನಚಿತ್ರ ಕಲಾವಿದೆ ಶ್ರೀಮತಿ ಜಯಂತಿ, ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀ ಗುರುಕಿರಣ್ ಅವರುಗಳು ಭಾಗವಹಿಸುವರು.  ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಅಭಿನೇತ್ರಿ ಶ್ರೀಮತಿ ಕೃಷ್ಣ ಕುಮಾರಿ ಅವರು ವಹಿಸಲಿದ್ದು ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ , ಶ್ರೀಮತಿ ಜಯಂತಿ ಮತ್ತು ಶ್ರೀ ಗುರುಕಿರಣ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಈ ಸಂದರ್ಭದಲ್ಲಿ ಖ್ಯಾತ  ಚಲನಚಿತ್ರ ಸಂಗೀತ ನಿರ್ದೇಶಕರಿಂದ ಡಾ : ರಾಜ್‌ಕುಮಾರ್ ಚಲನಚಿತ್ರಗಳಿಂದ ಆಯ್ದ ಅತ್ಯುತ್ತಮ ಗೀತೆಗಳ ಗಾಯನ ಕಾರ್ಯಕ್ರಮವಿದ್ದು ಇದಕ್ಕೆ ತ್ರಿಭುವನ್ ಮತ್ತು ಸಉಮನ್ ತಂಡದವರಿಂದ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 

ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಸ್ವರ್ಧೆ

ಬೆಂಗಳೂರು, ಏಪ್ರಿಲ್ 20 (ಕರ್ನಾಟಕ ವಾರ್ತೆ): ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ, ಕೇಂದ್ರ ವಲಯ, ಬೆಂಗಳೂರು ಇಲ್ಲಿ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಏಪ್ರಿಲ್ 23 ರಂದು ಶಾಲಾ ಮಕ್ಕಳಲ್ಲಿ ಗ್ರಂಥಾಲಯಗಳ ಅಭಿರುಚಿ ಹೆಚ್ಚಿಸಲು ವಿವಿಧ ಸ್ವರ್ಧೆಗಳನ್ನು ಏರ್ಪಡಿಸಲಾಗಿದೆ. ಗ್ರಂಥಾಲಯ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ವರ್ಧೆ ಹಾಗೂ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ವರ್ಧೆಯನ್ನು ಏರ್ಪಡಿಸಲಾಗಿದೆ.  ಸ್ವರ್ಧೆ ನಡೆಯುವ ಸ್ಥಳ ನಗರ ಕೇಂದ್ರ ಗ್ರಂಥಾಲಯ, ಕೇಂದ್ರ ವಲಯ, ನಂ. 35, 2 ನೇ ಕ್ರಾಸ್ ರಾಜಾರಾಮ್ ಮೋಹನ್ ರಾಯ್ ಬಡಾವಣೆ, ಕೆ.ಹೆಚ್. ರಸ್ತೆ, ಬೆಂಗಳೂರು -27  ಈ ಸುತ್ತಮುತ್ತಲಿನ ಶಾಳಾ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯಿಂದ ಮೇಲಿನ ಸ್ವರ್ಧೆಗಳಲ್ಲಿ ಭಾಗವಹಿಸಲು ಪ್ರತಿ ವಿಭಾಗಕ್ಕೆ 3 ಜನ ವಿದ್ಯಾರ್ಥಿಗಳ ಹೆಸರನ್ನು ಏಪ್ರಿಲ್ 23 ಬೆಳಿಗ್ಗೆ 9-00 ಗಂಟೆಯೊಳಗಾಗಿ ಮೇಲ್ಕಂಡ ವಿಳಾಸಕ್ಕೆ  ಕಳುಹಿಸಬಹುದು.  ಹೆಚ್ಚಿನ ವಿವರಗಳಿಗೆ 22240920 ನ್ನು ಸಂಪರ್ಕಿಸಬಹುದು. 

ಚುನಾವಣೆ  ರಜೆ

ಬೆಂಗಳೂರು, ಏಪ್ರಿಲ್ 20 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಚುನಾವಣೆ ನಡೆಯುವ ದಿನ 5-5-2013 ರಂದು ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆ/ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ನೌಕರ ಮತದಾರರಿಗೆ ಮತ ಚಲಾಯಿಸಲು ಅವಕಾಶ ಮಾಡಿಕೊಡಬೇಕಾಗಿದೆ.   ಪ್ರತಿ ಅರ್ಹ ಮತದಾರರಿಗೆ ಮತದಾನದ ದಿನಾಂಕದಂದು ವೇತನ ಸಹಿತ ರಜೆ ಮಂಜೂರು ಮಾಡುವುದು ಆಡಳಿತ ವರ್ಗದ ಕರ್ತವ್ಯವಾಗಿದೆ.  ವಿಷಯವನ್ನು ಸಂಬಂಧಪಟ್ಟ ಎಲ್ಲಾ ನೋಂದಾಯಿತ ಕಾರ್ಖಾನೆಗಳ ಆಡಳಿತ ವರ್ಗದವರ ಆದ್ಯ ಗಮನಕ್ಕೆ ತರುತ್ತಾ ಅಂದು ತಪ್ಪದೇ ವೇತನ ಸಹಿತ ರಜೆ ಘೋಷಿಸಿ ಎಲ್ಲಾ ಅರ್ಹ ಕಾರ್ಮಿಕರು ಸಹ ಮತದಾನ ಮಾಡಿ ಅವರ ಮೂಲಭೂತ ಹಕ್ಕು ಚಲಾಯಿಸಲು ಅನುವು ಮಾಡಿಕೊಡಲು ಹಾಗೂ ಯಾವುದೇ ಕಾರ್ಖಾನೆಯು ನಿರಂತರ ಉತ್ಪಾದನೆಯಲ್ಲಿ ತೊಡಗುವುದು ಅನಿವಾರ್ಯವೆಂದು ಕಂಡುಬಂದ ಪಕ್ಷದಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸಿಕೊಂಡು ಅಂತಹ ಉತ್ಪಾದನೆಗೆ ಸಂಬಂಧಪಟ್ಟ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಾಕಷ್ಟು ಕಾಲಾವಕಾಶ ಮಾಡಿಕೊಡಬೇಕೆಂದು  ನಿರ್ದೇಶಕರು, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಪ್ರಕಟಣೆ ತಿಳಿಸಿದೆ.  

ಪರಿಶೀಲನೆಯಲ್ಲಿ 253 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ: 3945 ಅಭ್ಯರ್ಥಿಗಳು ಕಣದಲ್ಲಿ

ಬೆಂಗಳೂರು, ಏಪ್ರಿಲ್ 20 (ಕರ್ನಾಟಕ ವಾರ್ತೆ): ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಿಗೆ ಒಟ್ಟು 3945 ಅಭ್ಯರ್ಥಿಗಳಿಂದ  5837 ನಾಮಪತ್ರಗಳು ಸಲ್ಲಿಕೆಯಾಗಿದ್ದು  ಪರಿಶೀಲನೆಯ ನಂತರ 253 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡು ಒಟ್ಟು 3692 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆಂದು ಮುಖ್ಯ ಚುನಾವಣಾಧಿಕಾರಿ ಶ್ರೀ ಅನೀಲ್ ಕುಮಾರ್ ಝಾ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 ಇದರಲ್ಲಿ ಪಕ್ಷವಾರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ -224, ಬಿಜೆಪಿ -223, ಜೆಡಿಎಸ್ -222, ಬಿಎಸ್‌ಪಿ-180, ಎನ್‌ಪಿಪಿ-30, ಸಿಪಿಐಂ -17, ಸಿಪಿಐ-9, ಮತ್ತು ಮಾನ್ಯತೆ ಹೊಂದಿಲ್ಲದ ಪಕ್ಷಗಳು 895 ಮತ್ತು ಸ್ವತಂತ್ರ ಅಭ್ಯರ್ಥಿಗಳು -1895 ಸೇರಿವೆ  ಇಂದು ಅಭ್ಯರ್ಥಿಗಳ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ದಿನವಾಗಿದ್ದು ಒಟ್ಟಾರೆ ವಿವರಗಳು ಮಧ್ಯರಾತ್ರಿ ವೇಳೆಗೆ ದೊರೆಯಲಿವೆ ಎಂದರು. 16 ಕ್ಕೂ ಹೆಚ್ಚು ಅಭ್ಯರ್ಥಿಗಳು ಸುಮಾರು 95 ಕ್ಷೇತ್ರಗಳಲ್ಲಿದ್ದು ಇಲ್ಲಿ ಮತಯಂತ್ರದ ವ್ಯವಸ್ಥೆಯನ್ನು ಪರಿಶೀಲಿಸಬೇಕಾಗಿದೆ ಎಂದರು.

 ಈವರೆಗೆ  ಚುನಾವಣಾ ವಿಚಕ್ಷಣ ದಳದಿಂದ ಒಟ್ಟಾರೆ 9 ಕೋಟಿ ರೂ.ಗಳಿಗೂ ಮೀರಿ ನಗದು ವಶಪಡಿಸಿಕೊಳ್ಳಲಾಗಿದೆ.  ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಬಳಿ 12 ಲಕ್ಷ , ರಾಯಚೂರಿನಲ್ಲಿ 7.5 ಲಕ್ಷ , ಬಿಜಾಪುರ ನಾಗಠಾಣ ಬಳಿ- 9.00 ಲಕ್ಷ, ಆನೇಕಲ್ ಬಳಿ 15.5 ಲಕ್ಷ, ಚಿಂತಾಮಣಿ ಬಳಿ -6.00 ಲಕ್ಷ ರೂ.ಗಳನ್ನು ನಿನ್ನೆ ವಶಪಡಿಸಿಕೊಳ್ಳಲಾಗಿದೆ.  ಇಂದು ದೊಡ್ಡಬಳ್ಳಾಪುರ ಬಳಿ 3.5 ಲಕ್ಷ ರೂ. ನಗದು ಹುಬ್ಬಳ್ಳಿಯಲ್ಲಿ 16 ಲಕ್ಷ ಹಾಗೂ ಕೊಳ್ಳೇಗಾಲದಲ್ಲಿ 15 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. 

ಉಡುಪಿ ಹೊರ ವಲಯದಲ್ಲಿ 1 ಕೋಟಿ ರೂ. ಮೌಲ್ಯದ 1 ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆಯಲ್ಲದೆ ಮೂರು ಜನರನ್ನು ಈ ಸಂಬಂಧ ಬಂಧಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಬೆಳಗಾವಿ ಬಳಿ 75 ಬಾಕ್ಸ್ ಮಧ್ಯ , ರಾಯಚೂರು ಜಿಲ್ಲೆ ದೇವದುರ್ಗ ಬಳಿ 40 ಬಾಕ್ಸ್, ಶಿಕಾರಿಪುರ ಬಳಿ 75 ಬಾಕ್ಸ್, ದಾವಣಗೆರೆ 22 ಬಾಕ್ಸ್, ಚನ್ನಗಿರಿ ಸಂತೆಬೆನ್ನೂರು ಬಳಿ 63 ಲಕ್ಷ ರೂ. ಮೌಲ್ಯದ ಮಧ್ಯವನ್ನು, ಬಳ್ಳಾರಿ ಬಳಿ 75 ಬಾಕ್ಸ್ ಮಧ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಯಿತಲ್ಲದೆ, ಬೆಳಗಾವಿ ಬಳಿ 10 ಕೆ.ಜಿ. ಬೆಳ್ಳಿ, ಚಿಕ್ಕಬಳ್ಳಾಪುರದ ಬಳಿ 176 ಸೀರೆಗಳು, ಕೋಲಾರದಲ್ಲಿ 96 ಸೀರೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತೆಂದು ಅವರು ತಿಳಿಸಿದರು.